ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗಿದೆ.
ಜನರು ತಾವು ಬೆಳೆದ ಬೆಳೆಗಳನ್ನು ಮೊದಲು ದೇವರಿಗೆ ಸಮರ್ಪಿಸಿ ನಂತರ ತಾವು ತಮ್ಮ ನಿತ್ಯದ ಜೀವನದಲ್ಲಿ ಬಳಕೆ ಮಾಡಿಕೊಳ್ಳುವ ವಾಡಿಕೆಯಿದೆ. ಇಂತಹ ಕೆಲ ಸಂಪ್ರದಾಯಗಳು ಕೆಲ ಹಳ್ಳಿಗಳಲ್ಲಿ ಮಾತ್ರ ಉಳಿದಿದ್ದು, ಮೋಳೆ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯ್ತು.
ಶ್ರೀ ಸಿದ್ದೇಶ್ವರ ದೇವರು ಸಂಕ್ರಮಣ ಹಬ್ಬದಂದು ಪಕ್ಕದ ಐನಾಪೂರ ಗ್ರಾಮದ ತನ್ನ ಪುತ್ರನಾದ ಕರಿಯೋಗ ಸಿದ್ಧೇಶ್ವರನಿಗೆ ಭೇಟಿಯಾಗಿ ಇಲ್ಲಿಗೆ ಬರುವುದು ವಾಡಿಕೆ. ಅದರಂತೆ ನಸುಕಿನ ವೇಳೆ ಐನಾಪೂರ ಗ್ರಾಮದಿಂದ ಮೋಳೆ ಗ್ರಾಮಕ್ಕೆ ಆಗಮಿಸಿ, ವರ್ಷದ ಮೊದಲ ಹಬ್ಬ ಸಂಕ್ರಮಣ ಹಬ್ಬದಂದು ತನ್ನ ಭಕ್ತರು ಬೆಳೆದ ಬೆಳೆಗಳನ್ನು ಸ್ವೀಕರಿಸಿ ಅವರಿಗೆ ಆಶೀರ್ವದಿಸಿದ್ದಾನೆಂದು ಗ್ರಾಮಸ್ಥರು ನಂಬಿದ್ದಾರೆ.
ಈ ಸುದ್ದಿಯನ್ನೂ ಓದಿ: ಕೊರೊನಾ ಭೀತಿ ಹಿನ್ನೆಲೆ: ಈ ಬಾರಿ ಸರಳವಾಗಿ ಗವಿಸಿದ್ದೇಶ್ವರ ಜಾತ್ರೆ ಆಚರಣೆ
ಈಗಿನ ದಿನಮಾನಗಳಲ್ಲಿ ಹಬ್ಬಗಳು, ಆಚರಣೆಗಳು ಪಟ್ಟಣ ಪ್ರದೇಶಗಳಲ್ಲಿ ನಶಿಸಿ ಹೋಗುತ್ತಿವೆ. ಆದರೆ, ಇಂತಹ ಕೆಲವು ಸಂಪ್ರದಾಯಗಳು ಇನ್ನು ಹಳ್ಳಿಗಳಲ್ಲಿ ಉಳಿದುಕೊಂಡಿದೆ ಎನ್ನುವುದಕ್ಕೆ ಮೋಳೆ ಗ್ರಾಮ ಸಾಕ್ಷಿಯಾಗಿದೆ.