ಬೆಳಗಾವಿ: ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಮಹಿಳೆ ಮೇಲೆ ಶೂಟೌಟ್ ನಡೆಸಿದ ಪ್ರಕರಣವನ್ನ ಸಂಕೇಶ್ವರ ಪೊಲೀಸರು ಭೇದಿಸಿದ್ದು, ಗುಂಡು ಹಾರಿಸಿ ಮಹಿಳೆಯನ್ನ ಕೊಂದಿದ್ದ ಆರೋಪಿ ಬಿಜೆಪಿ ಪುರಸಭೆ ಸದಸ್ಯನನ್ನು ಬಂಧಿಸಿದ್ದಾರೆ. ಸಂಕೇಶ್ವರ ವಾರ್ಡ ನಂಬರ್ 14ರ ಬಿಜೆಪಿ ಪುರಸಭೆ ಸದಸ್ಯ ಉಮೇಶ ಕಾಂಬಳೆ ಬಂಧಿತ ಆರೋಪಿ.
ಜ. 16ರಂದು ನಾಡ ಪಿಸ್ತೂಲ್ನಿಂದ ಶೈಲಾ ನಿರಂಜನ ಸುಭೇದಾರ (56) ಎಂಬ ಮಹಿಳೆಗೆ ಎದೆ ಹಾಗೂ ಕೈಗೆ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಪ್ರಕರಣ ಬೆನ್ನತ್ತಿದ್ದ ಸಂಕೇಶ್ವರ ಠಾಣೆಯ ಪಿಎಸ್ಐ ಗಣಪತಿ ಕೊಂಗನೊಳ್ಳಿ ಹಾಗೂ ಸಿಪಿಐ ರಮೇಶ್ ಛಾಯಾಗೋಳ, ಹವಾಲ್ದಾರ ಭೀಮಪ್ಪ ನಾಗನೂರ, ಬಸವರಾಜ ಕಪರಟ್ಟಿ ಅವರ ತಂಡ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಸಂಕೇಶ್ವರದಲ್ಲಿ ಶೂಟೌಟ್ ನಡೆಸಿ ಮಹಿಳೆಯ ಕೊಲೆ!
ಲೇವಾದೇವಿ ವ್ಯವಹಾರ ಮಾಡುತ್ತಿದ್ದ ಮಹಿಳೆಯಿಂದ ₹25 ಲಕ್ಷ ಹಣವನ್ನು ಉಮೇಶ ಕಾಂಬಳೆ ಪಡೆದಿದ್ದ. ಬಡ್ಡಿ ಸಮೇತ ಹಣ ಹಿಂದುರಿಗಸಲು ಮಹಿಳೆ ಪೀಡಿಸುತ್ತಿದ್ದ ಕಾರಣ, ಮಹಾರಾಷ್ಟ್ರದ ಸಾಂಗಲಿಯಿಂದ ಪಿಸ್ತೂಲ್ ತಂದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ. ಸಂಕೇಶ್ವರ ಪೊಲೀಸರ ಕಾರ್ಯಾಚರಣೆಗೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.