ಬೆಳಗಾವಿ: ಶಿವಸೇನಾ ನಾಯಕ, ರಾಜ್ಯಸಭೆ ಸದಸ್ಯ ಸಂಜಯ್ ರಾವತ್ ಮೇಲಿನ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ವಿಚಾರಣೆಯನ್ನು ಬೆಳಗಾವಿಯ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯವು 2023ರ ಫೆ.7 ಕ್ಕೆ ಮುಂದೂಡಿದೆ.
ಡಿ.1 ಕ್ಕೆ ಹಾಜರಾಗುವಂತೆ ಸಂಜಯ್ ರಾವತ್ ಸೇರಿ ನಾಲ್ವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಆದರೆ ಸಂಜಯ್ ರಾವತ್ ಇಂದು ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಹೀಗಾಗಿ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ.
ಪ್ರಕರಣ ಹಿನ್ನೆಲೆ: 2018ರ ಏಪ್ರಿಲ್ 18 ರಂದು ಬೆಳಗಾವಿಯ ಭಾಗ್ಯ ನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಸಂಜಯ್ ರಾವುತ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಆಗ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಇತ್ತು. ಹೀಗಾಗಿ ಚುನಾವಣೆ ಆಯೋಗದ ಅಧಿಕಾರಿಗಳು ಸಂಜಯ್ ರಾವತ್, ಕಿರಣ್ ಠಾಕೂರ್, ಪ್ರಕಾಶ್ ಬಿಳಗೋಜಿ, ಸುರೇಂದ್ರ ನಾಯಿಕ ವಿರುದ್ಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸಿದ್ದರು.
ಡಿ.1ರಂದು ವಿಚಾರಣೆಗೆ ಹಾಜರಾಗುವಂತೆ ನಾಲ್ವರಿಗೂ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತ್ತು. ವೈಯಕ್ತಿಕ ಕಾರಣದಿಂದ ನಮ್ಮ ಕಕ್ಷಿದಾರರಿಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಸಿಆರ್‌ಪಿಸಿ 205 ಸೆಕ್ಷನ್ ಪ್ರಕಾರ ವಿಚಾರಣೆಗೆ ಹಾಜರಾಗಲು ಮತ್ತೆ ಕಾಲಾವಕಾಶ ಕೊಡಬೇಕು ಎಂದು ಆರೋಪಿಗಳ ಪರ ವಕೀಲರು ಅರ್ಜಿ ಸಲ್ಲಿಸಿದರು. ಇದಕ್ಕೆ ನ್ಯಾಯಾಧೀಶರು ಸಮ್ಮತಿ ನೀಡಿ ಮುಂದಿನ ವಿಚಾರಣೆ ದಿನಾಂಕವನ್ನು ನಿಗದಿಗೊಳಿಸಿದರು.
(ಓದಿ: ಮನೆಯಿಂದ ಹೊರಡುವ ಮುನ್ನ ತಾಯಿಯ ಆಶೀರ್ವಾದ ಪಡೆದ ಸಂಜಯ್ ರಾವುತ್: ವಿಡಿಯೋ)