ಬೆಳಗಾವಿ: ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಮಾಜಿ ಶಾಸಕ ಸಂಜಯ್ ಪಾಟೀಲ ಮತ್ತೆ ಹರಿಹಾಯ್ದಿದ್ದಾರೆ. ಮರಾಠಿ ಭಾಷೆಯಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಸಂಜಯ್ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್‌ನ್ನು ಆನಂದಿಬಾಯಿ ಪೇಶ್ವೆಗೆ ಹೋಲಿಸಿದ್ದಾರೆ.
ಮರಾಠಾ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಸಂಜಯ್ ಪಾಟೀಲ್ ವಿಡಿಯೋ ಮೂಲಕ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಹರಿಹಾಯ್ದಿದ್ದಾರೆ.
ಸಂಜಯ್ ಪಾಟೀಲ್ ವಿಡಿಯೋದಲ್ಲಿ ಹೇಳಿದ್ದೇನು?
"ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ನಾನು ಮರಾಠಿ ವಿರೋಧಿ, ಮರಾಠಿ ವಿರುದ್ಧ ಮಾತನಾಡ್ತೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಈ ಹೇಳಿಕೆ ಕೇಳಿ ನನಗೆ ನಗು ಬರುತ್ತಿದೆ. ಸಂಜಯ್ ಪಾಟೀಲ್ ಮರಾಠಿ ವಿರುದ್ಧ ಮಾತನಾಡಲು ಸಾಧ್ಯವೇ?. ನಾನು ಕೊಲ್ಲಾಪುರದಲ್ಲಿ ಜನಿಸಿದ್ದು, ಜನ್ಮದಿಂದಲೇ ಮರಾಠಿಗನಾಗಿದ್ದೇನೆ. ನಾನು ಹಿಂದುತ್ವ ವಿಚಾರವಾದಿ, ಮರಾಠಿ, ಕನ್ನಡ, ಜಾತಿ ಧರ್ಮದ ಬಗ್ಗೆ ಮಾತನಾಡಲ್ಲ" ಎಂದಿದ್ದಾರೆ.
"ನಾನು ಶಾಸಕನಿದ್ದಾಗ ರಾಜಹಂಸಗಡದಲ್ಲಿ ಶಿವಾಜಿ ಸ್ಮಾರಕ ಕಾರ್ಯಕ್ಕೆ ಚಾಲನೆ ನೀಡಿದೆ. ಕರ್ನಾಟಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಆರಂಭಿಸಲು ಪ್ರಯತ್ನಿಸಿದ್ದೆ. ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಪೇಶ್ವೆಗಳ ಇತಿಹಾಸ ಗೊತ್ತಿದೆ. ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಕಾಲದಲ್ಲಿ ಆನಂದಿಬಾಯಿ ಎಂಬ ರಾಣಿ ಇದ್ದಳು. 'ಧ' ಅಕ್ಷರ 'ಮ' ಮಾಡಿ ಷಡ್ಯಂತ್ರ ಮಾಡಿದ್ದಳು. ಅದೇ ರೀತಿ ಇಲ್ಲಿಯೂ ಒಬ್ಬಳು ಆನಂದಿಬಾಯಿ ಇದ್ದಾಳೆ. 'ಧ' ಇದ್ದದ್ದನ್ನು 'ಮ' ಮಾಡಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾಳೆ" ಎಂದು ಟೀಕಿಸಿದ್ದಾರೆ.
"ನಾನು ನಿಮ್ಮೆಲ್ಲರಲ್ಲಿ ಕೈ ಮುಗಿದು ಮನವಿ ಮಾಡುತ್ತೇನೆ. ನಾನು ಖಟ್ಟಾ ಹಿಂದೂತ್ವವಾದಿ ವಿಚಾರವುಳ್ಳವನಾಗಿದ್ದೇನೆ. ಎಲ್ಲ ಭಾಷಿಕರು, ಸಮುದಾಯದವರನ್ನು ಗೌರವಿಸುತ್ತೇನೆ. ಕನ್ನಡ, ಮರಾಠಿ, ಗುಜರಾತಿ, ಕೊಂಕಣಿ ಎಲ್ಲ ಭಾಷೆಗಳನ್ನು ಗೌರವಿಸುತ್ತೇನೆ. ನನ್ನ ಮಾತೃಭಾಷೆ ಮರಾಠಿ ಬಗ್ಗೆ ನನಗೆ ಅಪಾರ ಪ್ರೇಮವಿದೆ. ಮರಾಠಿಗರ ವಿರುದ್ಧ ಸಂಜಯ್ ಪಾಟೀಲ್ ಮಾತನಾಡ್ತಾನಾ ಯಾರದ್ದಾದರೂ ಮನಸು ನೋಯಿಸಿದ್ರೆ ಕ್ಷಮೆಯಾಚಿಸುತ್ತೇನೆ. ಯಾರು ಮರಾಠಿಗರ ವಿರೋಧಿ ಅನ್ನೋದನ್ನ ನೀವು ನಿರ್ಧಾರ ಮಾಡಿ" ಎಂದು ವಿಡಿಯೋದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪ್ರತಿಭಟನೆ ಬಳಿಕ ವಿಡಿಯೋ ರಿಲೀಸ್:
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಬರಹದ ಬ್ಯಾನರ್ ಮರಾಠಿ ಭಾಷಿಕರು ಹಚ್ಚಿದ್ದಾರೆ ಎಂಬ ಹೇಳಿಕೆಗೆ ಸಂಜಯ್ ಪಾಟೀಲ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೆ ಅವರು ಈ ವಿಡಿಯೋ ರಿಲೀಸ್ ಮಾಡಿದ್ದಾರೆ.
ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಂಜಯ್ ಪಾಟೀಲ್ ಮರಾಠಿ ಭಾಷಿಕರಲ್ಲಿ ಕ್ಷಮೆಯಾಚಿಸಿದ್ದಾರೆ. ಮರಾಠಿ ಜನರು ಬ್ಯಾನರ್ ಹಚ್ಚಿದ್ದಾರೆ ಎಂದಿದ್ದ ಸಂಜಯ್ ಪಾಟೀಲ್ ವಿರುದ್ಧ ವಾಘವಡೆ ಗ್ರಾಮದಲ್ಲಿ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಬಳಿಕ ವಿಡಿಯೋ ಬಿಡುಗಡೆ ಮಾಡಿ ಕ್ಷಮೆಯಾಚನೆ ಜತೆಗೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಂಜಯ್ ಪಾಟೀಲ್ ಹರಿಹಾಯ್ದಿದ್ದಾರೆ. ಪೇಶ್ವೆಗಳ ಕಾಲದಲ್ಲಿ ಷಡ್ಯಂತ್ರ ಮಾಡಿ ನಾರಾಯಣ ರಾವ್ ಪೇಶ್ವೆ ಸಾವಿಗೆ ಕಾರಣವಾಗಿದ್ದ ಆನಂದಿಬಾಯಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಹೋಲಿಸಿದ್ದಾರೆ.