ಬೆಳಗಾವಿ: ಒಂದು ಲೀಟರ್ ನೀರಿಗೆ 20 ರೂ. ಆದರೆ ಅದೇ ಒಂದು ಲೀಟರ್ ಹಾಲಿಗೆ 15 ರೂ. ಕೊಡ್ತಿರಾ. ಹೀಗಾದ್ರೆ ರೈತ ಹೇಗೆ ಬದುಕಬೇಕು ಹೇಳಿ ಸಾಹೇಬ್ರೆ ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ಮುಂದೆ ರೈತರು ಅಳಲು ತೋಡಿಕೊಂಡಿದ್ದಾರೆ.
ರಾಮದುರ್ಗ ತಾಲೂಕಿನ ಕಡಬಿ ಗ್ರಾಮದಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ಕುರಿತು ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರೈತ ಗೂಳ್ಳಪ್ಪ ಬಾವಿಕಟ್ಟಿ, ಕೃಷಿಯಲ್ಲಿ ಅನುಭವಿಸುವ ಕಷ್ಟಗಳ ಕುರಿತು ಎಳೆ ಎಳೆಯಾಗಿ ಸಚಿವರಿಗೆ ಮನವರಿಕೆ ಮಾಡಿದರು.
ಸಾವಯವ ಕೃಷಿಗೆ ಎಲ್ಲಾ ರೈತರು ಆಸಕ್ತರೇ. ಆದರೆ ಅವರು ಬೆಳೆದಂತಹ ನೈಸರ್ಗಿಕ ಬೆಳೆಗೆ ವೈಜ್ಞಾನಿಕ ಬೆಲೆ ದೊರೆಯಬೇಕು. ಈಗಿನ ಪರಿಸ್ಥಿತಿ ಹೇಗಿದೆ ಎಂದರೆ ಒಂದು ಬಾಟಲ್ ನೀರಿಗೆ 20 ರೂಪಾಯಿ, ಅದೇ ಹಾಲು ಒಂದು ಲೀಟರ್ಗೆ 15 ರೂಪಾಯಿ. ಆದ್ದರಿಂದ ವ್ಯವಸ್ಥಿತ ವೈಜ್ಞಾನಿಕ ಬೆಲೆ ಸಿಗಬೇಕು. ಜೊತೆಗೆ ಕೃಷಿ ಭೂಮಿ ಹಾಳು ಮಾಡುವ ರಾಸಾಯನಿಕ ಪದಾರ್ಥಗಳನ್ನು ಬಳಸದಂತೆ ರೈತರಿಗೆ ಉಪದೇಶ ಹೇಳುವ ಬದಲು, ವಿಷಯುಕ್ತ ರಸಾಯನಿಕ ಗೊಬ್ಬರ ತಯಾರಿಸುವ ಕಾರ್ಖಾನೆಗಳ ವಿರುದ್ಧ ಸರ್ಕಾರ ಏಕೆ ಕ್ರಮ ಕೈಗೊಳ್ಳಲ್ಲ ಎಂದು ಸಚಿವರನ್ನು ಪ್ರಶ್ನಿಸಿದರು.
ರೈತರ ಪ್ರಶ್ನೆಗಳಿಗೆ ಸಂಯಮದ ಉತ್ತರ ನೀಡಿದ ಸಚಿವರು, ಕೃಷಿಯಲ್ಲಿ ವೈಜ್ಞಾನಿಕ ವಿಧಾನ ಅಳವಡಿಕೆ ಜೊತೆ ನಮ್ಮ ಪಾರಂಪರಿಕ ಕೃಷಿಗೆ ಉತ್ತೇಜನ ನೀಡಬೇಕು. ಸರ್ಕಾರ ರೈತರ ಹಿತಕ್ಕಾಗಿ ಅನೇಕ ಕಾರ್ಯಕ್ರಮ ತಂದಿದ್ದು, ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದರು.