ಬೆಳಗಾವಿ: ಸೇವೆಯಿಂದ ವಜಾಗೊಂಡಿದ್ದ ಕೆಎಸ್‌ಆರ್‌ಪಿ ಕಾನ್ಸ್‌ಟೇಬಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಗೋಕಾಕ ತಾಲೂಕಿನ ಸಂಗನಕೇರಿ ಕ್ರಾಸ್ ಬಳಿ ನಡೆದಿದೆ.
ಗೋಕಾಕ್ ತಾಲೂಕಿನ ನಲ್ಲಾನಟ್ಟಿ ಗ್ರಾಮದ ನಿವಾಸಿ ರಮೇಶ್ ಬಿಲಕುಂದಿ (26) ಮೃತಪಟ್ಟವರು. ಆದರೆ ಮಗ ಅಪಘಾತದಲ್ಲಿ ಮೃತಪಟ್ಟಿಲ್ಲ, ಸೊಸೆಯೇ ಕೊಲೆ ಮಾಡಿಸಿದ್ದಾಳೆ ಎಂದು ಮೃತನ ತಾಯಿ ಲಕ್ಷ್ಮಿಬಾಯಿ ಆರೋಪಿಸಿದ್ದಾರೆ.
ಮಗನ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ತಾಯಿ ಕಣ್ಣೀರಿಡುತ್ತಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ, ಸಿಎಂ ಬಸವರಾಜ್ ಬೊಮ್ಮಾಯಿಗೆ ಲಕ್ಷ್ಮಿಬಾಯಿ ಪತ್ರ ಬರೆದಿದ್ದಾರೆ. ಅಕ್ಟೋಬರ್ 3ರಂದು ಸಂಗನಕೇರಿ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ರಮೇಶ್ ಬಿಲಕುಂದಿ ಶವಪತ್ತೆಯಾಗಿದೆ. ಅಪರಿಚಿತ ವಾಹನ ಡಿಕ್ಕಿಯಾಗಿ ಪೇದೆ ಸಾವನ್ನಪ್ಪಿದ್ದಾಗಿ ಘಟಪ್ರಭಾ ಠಾಣೆಯಲ್ಲಿ ರಮೇಶ್ ಪತ್ನಿ ಲಕ್ಷ್ಮಿ ಪ್ರಕರಣ ದಾಖಲಿಸಿದ್ದಾರೆ.
ಆದ್ರೆ ರಮೇಶ್ ಬಿಲಕುಂದಿಯನ್ನು ಲಕ್ಷ್ಮೀ ಮತ್ತು ಮನೆಯವರು ಕೊಲೆ ಮಾಡಿದ್ದಾಗಿ ತಾಯಿ ಲಕ್ಷ್ಮಿಬಾಯಿ ಆರೋಪಿಸಿದ್ದಾರೆ. ಕೆಎಸ್‌ಆರ್‌ಪಿ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ರಮೇಶ್ ಬಿಲಕುಂದಿ ಶಿವಮೊಗ್ಗದ ಕೆಎಸ್‌ಆರ್‌ಪಿ 8ನೇ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ವಿಪರೀತ ಕುಡಿತದ ಚಟದಿಂದ ಕೆಲತಿಂಗಳ ಹಿಂದೆ ಸೇವೆಯಿಂದ ವಜಾಗೊಂಡಿದ್ದರು.
ಮೊದಲು ಲಕ್ಷ್ಮೀಯನ್ನು ಪ್ರೀತಿಸುತ್ತಿದ್ದ ರಮೇಶ್ ಬಿಲಕುಂದಿ, ಬೇರೆ ಯುವತಿಯ ಜೊತೆ ಮದುವೆಯಾಗಲು ಮುಂದಾಗಿದ್ದನು. ಆದರೆ ಲಕ್ಷ್ಮಿ ಕುಟುಂಬಸ್ಥರು ಒತ್ತಾಯಪೂರ್ವಕವಾಗಿ ಮದುವೆ ಮಾಡಿಸಿದ್ದರು ಎಂದು ರಮೇಶ್ ಪತ್ನಿ ಕುಟುಂಬಸ್ಥರ ವಿರುದ್ಧ ತಾಯಿ ಲಕ್ಷ್ಮೀಬಾಯಿ ಆರೋಪಿಸಿದ್ದಾರೆ. ಆದರೆ ರಮೇಶ್ ತಾಯಿ ಆರೋಪ ಅಲ್ಲಗಳೆದಿರುವ ಪತ್ನಿ ಲಕ್ಷ್ಮಿ ಪ್ರೀತಿಸಿ ಮದುವೆಯಾದ ಗಂಡನ ನಾನೇಕೆ ಕೊಲೆ ಮಾಡಿಸಲಿ?. ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ ಎಂದಿದ್ದಾರೆ.