ಚಿಕ್ಕೋಡಿ : ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಿಂದ ಕೆಲಹೊತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ.
ಒಂದು ಗುಂಪಿಗೆ ಸೇರಿದ ಮೂವರು ಅಂಕಲಿ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ಬಂಗಾರದ ಅಂಗಡಿಗೆ ಕಲ್ಲು ಹೊಡೆದಿದ್ದಾರೆ. ಇದರಿಂದ ಕೋಪಿತಗೊಂಡ ಮತ್ತೊಂದು ಗುಂಪು ಅಂಗಡಿಗೆ ಕಲ್ಲು ಹೊಡೆದ ಗುಂಪಿನ ಮೇಲೆ ದಾಳಿ ನಡೆಸಿದ್ದರಿಂದ ಕೆಲಹೊತ್ತು ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸರಿಯಾದ ಸಮಯಕ್ಕೆ ಪೊಲೀಸರು ಬಂದಿದ್ದರಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ.
ಘಟನೆ ಕುರಿತು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲಾಗಿದೆ ಎಂದು ಚಿಕ್ಕೋಡಿ ಡಿವೈಎಸ್ ಪಿ ಮನೋಜ ಕುಮಾರ ನಾಯಕ ತಿಳಿಸಿದರು.