ಬೆಳಗಾವಿ(ಬೆಂಗಳೂರು):ಅರಣ್ಯ ಭೂಮಿ ಗಡಿ ಗುರುತಿಸಿ ನಿಖರ ನಕ್ಷೆ ಮಾಡುವ ಸಲುವಾಗಿ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ಸರ್ವೆ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಇಂದು ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಹರೀಶ್ ಪೂಂಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಮೀಕ್ಷೆಯನ್ನು ಕಾಲಮಿತಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕರ್ನಾಟಕ ಅರಣ್ಯ ನಿಯಮದ ಪ್ರಕಾರ ಜಿಲ್ಲಾ ಅರಣ್ಯ ಅಥವಾ ರಕ್ಷಿತ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಹಾಗೂ 100 ಮೀಟರ್ ವ್ಯಾಪ್ತಿ ಭೂಮಿ ಮಂಜೂರಾತಿ ಪೂರ್ವದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸಮ್ಮತಿ ಪಡೆಯುವುದು ಕಡ್ಡಾಯವಾಗಿದೆ.
ಸಾಗುವಳಿ ಚೀಟಿಗೆ ಸಂಬಂಧಿಸಿದ ನಿರಾಪೇಕ್ಷಣ ಪತ್ರ: ರೈತರು ಕಂದಾಯ ಇಲಾಖೆ ಸಾಗುವಳಿ ಚೀಟಿಗೆ ಸಂಬಂಧಿಸಿದಂತೆ ನಿರಾಪೇಕ್ಷಣ ಪತ್ರ ಕೋರಿದಾಗ ಅರಣ್ಯ ಇಲಾಖೆಯ ದಾಖಲೆ, ಅಧಿಸೂಚನೆ ಹಾಗೂ ನಕಾಶೆಗಳೊಂದಿಗೆ ಪರಿಶೀಲಿಸಿ ಜಾಗವು ಅರಣ್ಯ ಪ್ರದೇಶ ವ್ಯಾಪ್ತಿಗೆ ಬರುತ್ತದೆ ಅಥವಾ ಇಲ್ಲವೇ ಎನ್ನುವ ಕುರಿತು ಹಿಂಬರಹ ನೀಡಲಾಗುತ್ತದೆ. ಅಧಿಸೂಚಿತ ಹಾಗೂ ಡೀಮ್ಡ್ ಅರಣ್ಯ ಪ್ರದೇಶಗಳಿಗೆ ಸರ್ವೆ ನಂಬರ್‍ವಾರು ವಿವರವಾದ ಮಾಹಿತಿ ಇಲ್ಲದಂತಹ ಸಂದರ್ಭದಲ್ಲಿ ನಿರಾಕ್ಷೇಪಣ ಪತ್ರ ನೀಡಲು ಕಂದಾಯ ಇಲಾಖೆಯೊಂದಿಗೆ ಚರ್ಚಿಸಿ ಜಂಟಿ ಮೋಜಿಣಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಅರಣ್ಯಭೂಮಿ ಗಡಿ ಗುರುತಿಸಿಲು ಜಂಟಿ ಸರ್ವೆ: ಬೆಳ್ತಂಗಡಿ ಪ್ರದೇಶದ ರಿ.ಸಂ.69ರಲ್ಲಿ ಅರಣ್ಯ ಭೂಮಿ ಬಗ್ಗೆ ಜಂಟಿ ಸರ್ವೆ ಕೈಗೊಂಡಾಗ 500 ಎಕರೆ ಅಧಿಕ ಭೂಮಿ ಅರಣ್ಯ ಇಲಾಖೆ ಭೂಮಿಯೊಂದಿಗೆ ಇರುವುದು ಕಂಡುಬಂದಿದೆ. ಸರ್ಕಾರ ಅರಣ್ಯಭೂಮಿ ಗಡಿ ಗುರುತಿಸಿಲು ಜಂಟಿ ಸರ್ವೆ ನಡೆಸಬೇಕು. ಅರಣ್ಯ ಹಾಗೂ ಕಂದಾಯ ಇಲಾಖೆ ಮೋಜಿಣಿಗೆ ಕಾಲಮಿತಿ ನಿಗದಿ ಪಡಿಸುವಂತೆ ಶಾಸಕ ಹರೀಶ್ ಪೂಂಜಾ ಸಚಿವರಲ್ಲಿ ಕೋರಿದರು.
ಅರಣ್ಯ ಭೂಮಿ ಅತಿಕ್ರಮಣ ಮಾಡಬಾರದೆಂದು ಅರಿವು: ಅರಣ್ಯ ಪ್ರದೇಶ ಮತ್ತು ಕಂದಾಯ ಭೂಮಿಯ ಗಡಿ ಗುರುತಿಸುವಿಕೆ ಕಾರ್ಯ ಅಗತ್ಯ ಇದೆ. ಹತ್ತು ವರ್ಷಕ್ಕೊಮ್ಮೆ ಗಡಿ ಗುರುತಿಸುವ ಕಾರ್ಯ ನಡೆಯಬೇಕು ಎಂಬ ನಿಯಮ ಇದ್ದು, 10 ರಿಂದ 15 ವರ್ಷಗಳಿಗೆ ಅದು ನಡೆಯಲಿದೆ. ಬುಡಕಟ್ಟು ಜನಾಂಗದವರು, ರೈತರು ಜಮೀನಿನಲ್ಲಿ ಬೇಸಾಯ ಮಾಡಿಕೊಂಡಿರುವುದು, ಮನೆ ನಿರ್ಮಿಸಿಕೊಂಡಿದ್ದಾರೆ. ಭೂಮಿಯನ್ನು ಅತಿಕ್ರಮಣ ಮಾಡಬಾರದು ಎಂಬ ಅರಿವು ಮೂಡಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಇದನ್ನೂಓದಿ:ಸರ್ಕಾರಿ ಆಸ್ತಿ ರಕ್ಷಣೆಗೆ ಅಡ್ವೊಕೇಟ್ಗಳ ಪ್ರತ್ಯೇಕ ವಿಭಾಗ ರಚನೆ: ಡಿಸಿಎಂ ಡಿ ಕೆ ಶಿವಕುಮಾರ್