ಚಿಕ್ಕೋಡಿ(ಬೆಳಗಾವಿ): ಕಳೆದ ಎರಡು ದಿನಗಳ ಹಿಂದೆ ಕೃಷ್ಣಾ ನದಿ ಒಳ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ-ಕಲ್ಲೋಳ ಸೇತುವೆ ಜನ, ವಾಹನ ಸಂಚಾರಕ್ಕೆ ಮುಕ್ತವಾಗಿತ್ತು.
ಆದರೆ, ಕಳೆದ 10 ದಿನಗಳಲ್ಲಿ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಯಡೂರ - ಕಲ್ಲೋಳ ಸೇತುವೆ ಕುಸಿಯುವ ಭೀತಿಯಲ್ಲಿದ್ದು ಪ್ರವಾಹದ ರಭಸಕ್ಕೆ ಬ್ಯಾರೇಜ್ನ ಒಂದು ಪಿಲ್ಲರ್ ಕೊಚ್ಚಿ ಹೋಗಿತ್ತು. ಇದರಿಂದ ಸ್ಥಳೀಯರು ಯಡೂರ - ಕಲ್ಲೋಳ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಿದ್ದಾರೆ.
ಸ್ಥಳೀಯರ ಹಿತದೃಷ್ಟಿಯಿಂದ ಕಲ್ಲೋಳ ಮತ್ತು ಯಡೂರ ಗ್ರಾಮಗಳ ಎರಡೂ ಬದಿಗೆ ಕಲ್ಲು ಮಣ್ಣು ಹಾಕಿ ಮತ್ತು ಗೇಟ್ ಅಳವಡಿಸಿ ಬ್ಯಾರೇಜ್ ಮೇಲಿಂದ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ.
ಸುಮಾರು 50 ವರ್ಷಗಳ ಹಳೆಯದಾದ ಕಲ್ಲೋಳ ಸೇತುವೆ ಸಂಪೂರ್ಣವಾಗಿ ತುಕ್ಕು ಹಿಡಿದಿದೆ. ಇಂದು, ನಾಳೆ ಕುಸಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಆದರೆ, ಸದ್ಯಕ್ಕೆ ಸ್ಥಳೀಯರು ಪಿಲ್ಲರ್ ಕುಸಿದ ಸ್ಥಳದಲ್ಲಿ ಕಟ್ಟಿಗೆ ಹಾಕಿ ಆ ಸ್ಥಳದಲ್ಲಿ ಯಾರೂ ಪ್ರಯಾಣಿಸಬಾರದು ಎಂದು ರಸ್ತೆ ಬಂದ್ ಮಾಡಿದ್ದಾರೆ.