ಚಿಕ್ಕೋಡಿ : ಲಾಕ್ಡೌನ್ ಹಿನ್ನೆಲೆ ಆಟೋ ಚಾಲನೆ ಮಾಡುವಂತಿಲ್ಲ. ಮಾ.22 ರಂದು ಜನತಾ ಕರ್ಪ್ಯೂ ಗೆ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಕರೆ ನೀಡಿದರು. ನಂತರ ಇವತ್ತಿನವರೆಗೂ ಲಾಕ್ ಡೌನ್ ಮುಂದುವರಿಸಿದ್ದರಿಂದ ಎಲ್ಲ ಆಟೋ ಚಾಲಕ, ಮಾಲೀಕರು ತಮ್ಮ ಜೀವನವನ್ನು ನಡೆಸಲು ತುಂಬಾ ತೊಂದರೆ ಆಗುತ್ತಿದೆ ಎಂದು ನಿಪ್ಪಾಣಿ ಆಟೋ ಚಾಲಕರ ಸಂಘದ ಅಧ್ಯಕ್ಷ ಪ್ರವೀಣ ಉತ್ತಳೆಕರ ಹೇಳಿದರು.
ನಿಪ್ಪಾಣಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇವತ್ತೆ ದುಡಿದು ಇವತ್ತೆ ತಿನ್ನುವ ನೂರಾರು ಕುಟುಂಬಗಳಿವೆ. ಲಾಕ್ಡೌನ್ ಗೆ ನಮ್ಮ ಸಹಮತ ಇದೆ. ದೇಶದ ರಾಜಧಾನಿ ದೆಹಲಿಯಲ್ಲಿ ಸರ್ಕಾರ ದಿನಗೂಲಿಗಾರರಿಗೆ , ಆಟೋ ಚಾಲಕರಿಗೆ, ಕಟ್ಟಡ ಕಾರ್ಮಿಕರ ಖಾತೆಗೆ ತಿಂಗಳ ರೇಷನ್ಗೆ ಎಂದು 5,000 ರೂ. ಜಮಾ ಮಾಡಿದೆ. ಇದರಿಂದ ಅವರಿಗೆ ಜೀವನ ನಡೆಸಲು ಅನುಕೂಲವಾಗಿದೆ ಎಂದರು.
ಲಾಕ್ಡೌನ್ ಹಿನ್ನೆಲೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದೆ. ದೆಹಲಿ ಮಾದರಿಯಲ್ಲಿ ಎಲ್ಲ ಸೌಕರ್ಯಗಳನ್ನು ಒದಗಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ ಎಂದು ಹೇಳಿದರು.