ಬೆಳಗಾವಿ: ಬಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಹೆರಿಗೆ ವೇಳೆ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಹೆರಿಗೆ ವಾರ್ಡ್ ಎದುರು ಮಗುವಿನ ಪೋಷಕರು ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸಿದರು. ಈ ವೇಳೆ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಲ್ಲದೇ, ತಂದೆ ಮತ್ತು ಅಜ್ಜಿ ಕಣ್ಣೀರು ಹಾಕಿದ್ದಾರೆ.
ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದ ನಿವಾಸಿ ಸುನೀತಾ ಉಚ್ಚಗಾಂವಕರ್ ಎಂಬ ಬಾಣಂತಿ ಕಳೆದ ಒಂದು ವಾರದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಸೀಜರಿನ್ ಮಾಡುವ ಸಂದರ್ಭದಲ್ಲಿ ಮಗು ಸಾವನ್ನಪ್ಪಿದೆ. ಇದರಿಂದ ರೊಚ್ಚಿಗೆದ್ದ ಕುಟುಂಬಸ್ಥರು ಬಿಮ್ಸ್ ಆಸ್ಪತ್ರೆಯ ವೈದ್ಯರ ವಿರುದ್ಧ ಕಿಡಿಕಾರಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಬಾಣಂತಿ ಸುನೀತಾ ಅವರ ತಾಯಿ ಭಾರತಿ ಉಚ್ಚಗಾಂವಕರ್, ಅವಧಿ ಮುಗಿದರೂ ಹೆರಿಗೆಯಾಗದ ಹಿನ್ನೆಲೆ ಸೀಜರಿನ್ ಮಾಡುವಂತೆ ಕೇಳಿಕೊಳ್ಳಲಾಗಿತ್ತು. ನಾರ್ಮಲ್ ಡೆಲಿವರಿ ಮಾಡೋಣ ಅಂತಾ ಎರಡು ದಿನಗಳ ಕಾಲ ಆಸ್ಪತ್ರೆ ವೈದ್ಯರು ಸಮಯ ಕಳೆದರು. ನಿನ್ನೆ ಮಗು ಆರೋಗ್ಯವಾಗಿದೆ. ಹಾರ್ಟ್ ಬೀಟ್ ಎಲ್ಲವೂ ನಾರ್ಮಲ್ ಇದ್ದು, ಆರೋಗ್ಯವಾಗಿದೆ ಅಂತಾ ಹೇಳಿದ್ದರು. ಇಂದು ಬೆಳಗ್ಗೆ ಸೀಜರಿನ್ ಮಾಡ್ತೀವಿ ಅಂತಾ ಅವರೇ ಕರೆದೊಯ್ದಿದ್ದರು. ಬಳಿಕ ಮಧ್ಯಾಹ್ನ ಮಾಡೋಣ ಅಂತಾ ಹೇಳಿ ಇದೀಗ ಮಗು ಮೃತಪಟ್ಟಿದೆ ಅಂತಿದ್ದಾರೆ. ಎರಡು ದಿನಗಳ ಹಿಂದೆ ಸೀಜರಿನ್ ಹೆರಿಗೆ ಮಾಡಿಸಿದ್ರೆ ನಮ್ಮ ಮಗು ಬದುಕುತ್ತಿತ್ತು ಎಂದು ಕಣ್ಣೀರು ಹಾಕಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ಯಾರೂ ಬರಲ್ಲ. ಕೇವಲ ನರ್ಸ್ ನೋಡ್ತಾರೆ. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಷಿನ್ ಇಲ್ಲ. ಹೊರಗೆ ಹೋಗಿ ಅಂತಾರೆ ಎಂದು ಬಿಮ್ಸ್ ಹೆರಿಗೆ ವಾರ್ಡ್ ಎದುರು ಮಗುವಿನ ಅಜ್ಜಿ ಭಾರತಿ ಗಂಭೀರ ಆರೋಪವನ್ನ ಮಾಡಿದ್ದಾರೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಹರಸಾಹಸಪಟ್ಟರು.
ಓದಿ: ಯಾವುದೇ ಸರ್ಕಾರಿ ಶಾಲೆ ಮುಚ್ಚಲ್ಲ, ಅಗತ್ಯ ಬಿದ್ದರೆ ಎರಡು ಮೂರು ಶಾಲೆ ಸಂಯೋಜನೆ: ಸಚಿವ ನಾಗೇಶ್