ಕರುನಾಡಿನ, ಕಿತ್ತೂರು ಮತ್ತು ಉಳ್ಳಾಲದ ರಾಣಿಯರಿಬ್ಬರೂ ಆಳಿದ್ದು ಸಣ್ಣ ಸಣ್ಣ ಪ್ರಾಂತ್ಯಗಳೇ. ಆದರೆ, ಚೆನ್ನಮ್ಮ ಮತ್ತು ಅಬ್ಬಕ್ಕನ ಹೋರಾಟ ಮುಂದೆ ದೇಶ ದಾಸ್ಯದಿಂದ ಮುಕ್ತಿ ಹೊಂದಲು ಪ್ರೇರಣೆಯಾಯ್ತು.
ಬ್ರಿಟಿಷರ ವಿರುದ್ಧ ಸಿಡಿದೆದ್ದ ದೇಶದ ಮೊದಲ ವೀರ ನಾರಿ ಚೆನ್ನಮ್ಮ, ಸ್ವಾತಂತ್ರ್ಯ-ಸ್ವಾಭಿಮಾನದ ಪ್ರತಿರೂಪ. ಕಾಕತಿಯ ದೇಸಾಯಿ ದೂಳಪ್ಪಗೌಡ-ಪದ್ಮಾವತಿಯವರ ಏಕಮಾತ್ರ ಪುತ್ರಿ. 1782ರಲ್ಲಿ ಪಟ್ಟಕ್ಕೇರಿದ್ದ ಕಿತ್ತೂರಿನ ಮಲ್ಲಸರ್ಜನ, ಚೆನ್ನಮ್ಮ ಅವರ ಕೈಹಿಡಿದರು. 1816ರಲ್ಲಿ ಮಲ್ಲಸರ್ಜನ ಕಾಲವಾದ ತರುವಾಯ, ಹಿರಿಯ ದೇಸಾಯಿಣಿ ರುದ್ರಮ್ಮರ ಮಗ ಶಿವಲಿಂಗಸರ್ಜನ ಪಟ್ಟವೇರಿದರು. ಆದರೆ, ಇವರು ಅಕಾಲಿಕವಾಗಿ ಮೃತಪಟ್ಟರು. ಆಗಲೇ ದತ್ತಕ ವಿಷಯ ಬಂದಾಗ, ಕಂಪನಿ ಸರ್ಕಾರ ಒಪ್ಪಲಿಲ್ಲ.
ಅವತ್ತು 1824ರ ಅಕ್ಟೋಬರ್ 23. ಕಿತ್ತೂರಿನ ಕೋಟೆ ಬಾಗಿಲು ತೆರೆಯದಿದ್ದಾಗ, ಧಾರವಾಡದ ಬ್ರಿಟಿಷ್ ಕಲೆಕ್ಟರ್ ಥ್ಯಾಕರೇ, ಚೆನ್ನಮ್ಮರ ಮೇಲೆ ಯುದ್ಧ ಸಾರಿದ. ಇದರಿಂದ ಕುಗ್ಗದ ಚೆನ್ನಮ್ಮ, ಬಂಟ ರಾಯಣ್ಣ, ಅಮಟೂರು ಬಾಳಪ್ಪನ ಜತೆ ಸೇರಿ ಯುದ್ಧ ಮಾಡಿದರು. ವಿಜಯದಶಮಿ ದಿನವೇ ಥ್ಯಾಕರೇ ರುಂಡ ಚೆಂಡಾಡಲಾಯ್ತು. ಅದೇ ನೆನಪಿಗಾಗೇ ಪ್ರತಿವರ್ಷ ಅಕ್ಟೋಬರ್ 23ಕ್ಕೆ ಕಿತ್ತೂರು ಉತ್ಸವ ನಡೆಯುತ್ತದೆ. ಆದರೆ, 2ನೇ ಯುದ್ಧದಲ್ಲಿ ಚೆನ್ನಮ್ಮ ಸೋತು ಆಂಗ್ಲರಿಗೆ ಸೆರೆಯಾದರು. ಧೀರ ರಾಯಣ್ಣ ಗೆರಿಲ್ಲ ತಂತ್ರದಿಂದ ಬ್ರಿಟಿಷರನ್ನು ಹಿಮ್ಮೆಟ್ಟಿಸಲು ಹೋರಾಡಿದನಾದ್ರೂ ಅದು ಸಾಧ್ಯವಾಗಲಿಲ್ಲ. ರಾಯಣ್ಣನ ಅತ್ತ ಗಲ್ಲಿಗೇರಿದ್ರೇ, ಇತ್ತ ತಾಯಿ ಚೆನ್ನಮ್ಮ 1829 ಫೆಬ್ರವರಿ 2ರಂದು ಬೈಲಹೊಂಗಲದ ಕಾರಾಗೃಹದಲ್ಲಿ ಉಸಿರು ಚೆಲ್ಲಿದರು.
ತುಳುನಾಡಿನ ಇತಿಹಾಸದಲ್ಲಿಯೇ ಅಬ್ಬಕ್ಕನ ಹೋರಾಟ ಮೈಲಿಗಲ್ಲು: ತುಳುನಾಡಿನ ರಾಣಿ ಅಬ್ಬಕ್ಕ ದೇವಿ ವಸಾಹತುಶಾಹಿ ವಿರುದ್ಧದ ಹೋರಾಟದಲ್ಲಿ ದೇಶದ ಮೊದಲಿಗ ಹೋರಾಟಗಾರ್ತಿಯರಲ್ಲಿ ಒಬ್ಬರು. ಮೂಡುಬಿದಿರೆಯ ಚೌಟ ವಂಶದವವರಾದ ಇವರ ರಾಜಧಾನಿ ಉಳ್ಳಾಲ. 1525 ರಿಂದ 1582ರವರೆಗೆ ಅಬ್ಬಕ್ಕ ಉಳ್ಳಾಲ ಕೇಂದ್ರಿತ ಪ್ರಾಂತ್ಯದ ರಾಣಿಯಾಗಿದ್ದರು. ಗೋವಾ ಮೇಲೆ ಹಿಡಿತ ಸಾಧಿಸಿದ್ದ ಪೋರ್ಚುಗೀಸರು 1525ರಲ್ಲಿ ಮಂಗಳೂರು ಬಂದರು ನಾಶಪಡಿಸಿದರು. ಕರಾವಳಿಯ ಅಕ್ಕಿ, ಶುಂಠಿ, ಅಡಕೆ, ಒಣಮೆಣಸು ಹಾಗೂ ದಾಲ್ಚಿನ್ನಿಗೆ ಯುರೋಪ್‌ನಾದ್ಯಂತ ಭಾರಿ ಬೇಡಿಕೆಯಿತ್ತು. ಇದು ಪೋರ್ಚುಗೀಸರ ಕಣ್ಣು ಕುಕ್ಕಿಸಿತ್ತು. ಕರಾವಳಿ ಭಾಗ ವಸಾಹತುಗೊಳಿಸಲು ಹವಣಿಸ್ತಿದ್ದಾಗ ಪೋರ್ಚುಗೀಸರನ್ನು ರಾಣಿ ಅಬ್ಬಕ್ಕ ಏಕಾಂಗಿಯಾಗಿ 4 ದಶಕ ಹಿಮ್ಮೆಟ್ಟಿಸಿದ್ದರು. 1930ರ ಕೆನರಾ ದಂಗೆ, ಕೂಟದಂಗೆಗಳು ಬ್ರಿಟಿಷರ ವಿರುದ್ಧ ಧ್ವನಿಯೆತ್ತಲು ಅಬ್ಬಕ್ಕ ಪ್ರೇರಣೆಯಾದರು.
ಮಂಗಳೂರಿನ ಲಕ್ಷ್ಮಪ್ಪ ಅರಸ ಅವರೊಂದಿಗೆ ಅಬ್ಬಕ್ಕನ ವಿವಾಹವಾದ್ರೂ ಆ ದಾಂಪತ್ಯ ಹೆಚ್ಚು ಕಾಲ ಇರಲಿಲ್ಲ. ಆಗ ಅಬ್ಬಕ್ಕ ಉಳ್ಳಾಲಕ್ಕೆ ಹಿಂತಿರುಗಿದರು. ಪತಿ ಲಕ್ಷ್ಮಪ್ಪ ಅಬ್ಬಕ್ಕನ ವಿರುದ್ಧ ಸೇಡು ತೀರಿಸಿಕೊಳ್ಳಲು ಪೋರ್ಚುಗೀಸರ ಜತೆ ಸೇರಿದ್ದರು. ಫಿರಂಗಿ ಶಸ್ತ್ರಾಸ್ತ್ರ ಹಾಗೂ ನೌಕಾ ದಳದ ಎದುರು ಕತ್ತಿ, ಗುರಾಣಿ ಹಿಡಿದೇ ಪೋರ್ಚುಗೀಸರ ವಿರುದ್ಧ ಗೆದ್ದು ಬೀಗಿದ್ದರು ರಾಣಿ ಅಬ್ಬಕ್ಕ. ಪೋರ್ಚುಗೀಸರ ರಾಜಕೀಯ ಪ್ರಾಬಲ್ಯದ ಆಕಾಂಕ್ಷೆಗೆ ಕೊಳ್ಳಿ ಇಟ್ಟರು ಈ ಉಳ್ಳಾಲದ ಧೀರೆ. ಆ ಮೂಲಕ ವಿಶ್ವವಿಖ್ಯಾತರಾದುರು ರಾಣಿ ಅಬ್ಬಕ್ಕ.
ಇದನ್ನೂ ಓದಿ: ಹರ್ ಘರ್ ತಿರಂಗಾ: ಕಾರಿಗೆ ತ್ರಿವರ್ಣ ಬಳಿಸಿದ ಸೂರತ್ ಉದ್ಯಮಿ..ದಾರಿ ಉದ್ದಕ್ಕೂ ರಾಷ್ಟ್ರಧ್ವಜ ವಿತರಣೆ
ವಿದೇಶಿ ಆಕ್ರಮಣಕಾರರ ಮೇಲೆ ನಾರಿಯರೂ ವೀರಾವೇಶದಿಂದ ಹೋರಾಡಿದ ಪರಂಪರೆ ಈ ಮಣ್ಣಿನದ್ದ. ಇವರಾಳಿದ ಕೋಟೆ, ಕೊತ್ತಲು ನಶಿಸಿದ್ದರೂ ಈ ರಾಣಿಯರ ಶೌರ್ಯ, ಪರಾಕ್ರಮ ಮಾತ್ರ ಅಜರಾಮರ.