ಬೆಳಗಾವಿ: ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಕುರಿತು ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೀರನವಾಡಿಯಲ್ಲಿನ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ ನಿನ್ನೆಯೇ ಸುಖಾಂತ್ಯವಾಗಿರೋದು ಒಳ್ಳೆಯ ಬೆಳವಣಿಗೆ. ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ದೇಶದ ಮಹಾಪುರುಷರು. ಅವರಿಬ್ಬರೂ ಯಾವುದೇ ಜಾತಿಗೆ ಸೀಮಿತವಲ್ಲ. ಇಬ್ಬರೂ ನಮ್ಮ ಸಮಾಜದ ಆಸ್ತಿಯಾಗಿದ್ದಾರೆ. ಅಂತಹ ಮಹಾನ್ ನಾಯಕರಿಗೆ ಅವಮಾನವಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.
ಕರ್ನಾಟಕ ಸರ್ಕಾರಕ್ಕೆ ಶಿವಸೇನೆ ಪತ್ರ ಬರೆದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಶಿವಸೇನೆ ಉದ್ದೇಶವೇ ಪತ್ರ ಬರೆಯೋದು. ಅವ್ರು ಅದೇ ಅಜೆಂಡಾ ಇಟ್ಟುಕೊಂಡು ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಏರಿದ್ದಾರೆ. ಈ ಕುರಿತು ನಾನು ಬಹಳಷ್ಟು ಸಾರಿ ಹೇಳಿದ್ದೇನೆ. ನಾವು ಅದಕ್ಕೆ ಮಹತ್ವ ಕೊಡಬಾರದು ಎಂದರು.
ಇವತ್ತು ಪೀರನವಾಡಿಯಲ್ಲಿನ ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಪುತ್ಥಳಿಗೆ ಸಚಿವ ಈಶ್ವರಪ್ಪ ಮತ್ತು ನಾನು ಹೂವಿನ ಹಾರ ಹಾಕಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುತ್ತೇವೆ ಎಂದರು.
ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ನಾನೊಬ್ಬನೇ ನಿರ್ಧಾರ ತೆಗೆದುಕೊಳ್ಳಲು ಬರೋದಿಲ್ಲ. ಆದ್ರೂ ಮುಖ್ಯಮಂತ್ರಿಗಳಲ್ಲಿ ನಾನು ಕೂಡ ಪ್ರಕರಣ ಹಿಂಪಡೆಯುವಂತೆ ಆಗ್ರಹ ಮಾಡುತ್ತೇನೆ ಎಂದರು.