ಬೆಳಗಾವಿ: ರಾಸಲೀಲೆ ಸಿಡಿ ಪ್ರಕರಣದ ಜಾಲದಿಂದ ಪಾರಾಗಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮುಂಬೈ ಯಾತ್ರೆ ಯಶ ಕಂಡಿದೆ. ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಜೊತೆಗೆ ಮುಂಬೈನಲ್ಲಿ ನಡೆದ ಎರಡು ದಿನಗಳ ಕಾಲ ಮಾತುಕತೆ ರಮೇಶ್ ಜಾರಕಿಹೊಳಿಗೆ ಫಲ ನೀಡಿದೆ ಎನ್ನಲಾಗುತ್ತಿದೆ.
ಮುಂಬೈನಿಂದ ಬೆಳಗಾವಿಗೆ ಮರಳುತ್ತಿದ್ದಂತೆ ರಮೇಶ್ ಜಾರಕಿಹೊಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ಮಾಡುವಂತೆ ಬುಲಾವ್ ನೀಡಿದ್ದಾರೆ. ಹೀಗಾಗಿ ಅವರು ಇಂದು ಬೆಳಗ್ಗೆ 10.45ಕ್ಕೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಬಳಿಕ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಿಡಿ ಪ್ರಕರಣದಿಂದ ಪಾರಾಗುವ ಸಂಬಂಧ ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಸಿಡಿ ಪ್ರಕರಣದಲ್ಲಿ ರಾಜ್ಯ ಬಿಜೆಪಿ ನಾಯಕರ ನಿರ್ಲಕ್ಷ್ಯದಿಂದ ನೊಂದಿದ್ದ ರಮೇಶ್ ಜಾರಕಿಹೊಳಿ, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರ ಮನೆ ಬಾಗಿಲು ತಟ್ಟಿದ್ದರು. ನಾಲ್ಕು ದಿನಗಳ ಕಾಲ ಮುಂಬೈನಲ್ಲಿ ತಂಗಿದ್ದ ಅವರು ಎರಡು ದಿನದ ಫಡ್ನವಿಸ್ ಅವರನ್ನು ಭೇಟಿ ಮಾಡಿ ಸಿಡಿ ಪ್ರಕರಣ ಸಂಬಂಧ ಮಹತ್ವದ ಮಾತುಕತೆ ನಡೆಸಿದ್ದರು. ಅಲ್ಲದೆ ಪ್ರಕರಣ ಸಂಬಂಧ ರಾಜ್ಯ ನಾಯಕರು ತೋರುತ್ತಿರುವ ನಿರ್ಲಕ್ಷ್ಯ ಬಗ್ಗೆಯೂ ಫಡ್ನವಿಸ್ ಗಮನಕ್ಕೆ ತರುವ ಜೊತೆಗೆ ಪ್ರಕರಣದಲ್ಲಿ ಪಾರಾಗಲು ತಮ್ಮ ಸಹಕಾರ ಬೇಕು ಎಂದು ಕೋರಿದ್ದರು.
ಈ ಪ್ರಕರಣದಲ್ಲಿ ನೀವು ಕೈಹಿಡಿಯದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಪಡೆಯುವ ಬಗ್ಗೆ ಅಭಿಪ್ರಾಯ ಮಂಡಿಸಿದ್ದರು. ರಮೇಶ್ ಜಾರಕಿಹೊಳಿ ಮನವಿಗೆ ಸ್ಪಂದಿಸಿದ ದೇವೇಂದ್ರ ಫಡ್ನವಿಸ್ ಹೈಕಮಾಂಡ್ ನಾಯಕರ ಮೂಲಕ ರಾಜ್ಯ ನಾಯಕರಿಗೆ ನಿರ್ದೇಶನ ನೀಡುವ ನಿಟ್ಟಿನಲ್ಲಿ ಕ್ರಮವಹಿಸಿದ್ದರು. ಅಲ್ಲದೆ ನಿಮ್ಮ ಜೊತೆ ಬಿಜೆಪಿ ನಾಯಕರಿದ್ದು, ರಾಜೀನಾಮೆ ನಿರ್ಧಾರ ಬೇಡ ಎಂದಿದ್ದರು. ಫಡ್ನವಿಸ್ ಅವರ ಅಭಯದಿಂದ ಖುಷಿಯಿಂದ ಬೆಳಗಾವಿಗೆ ಮರಳಿದ್ದ ರಮೇಶ್ ಜಾರಕಿಹೊಳಿಗೆ ನಿನ್ನೆ ಬೆಳಗ್ಗೆ ಬಿ.ಎಸ್.ಯಡಿಯೂರಪ್ಪನವರು ಕರೆ ಮಾಡಿ ಭೇಟಿ ಮಾಡುವಂತೆ ಹೇಳಿದ್ದರು.
ಮೂವರ ವಿರುದ್ಧ ಯಡಿಯೂರಪ್ಪಗೆ ದೂರು?:
ಮುಖ್ಯಮಂತ್ರಿ ಬಿ.ಎಸ್.ವೈ ಬುಲಾವ್ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಬೆಳಗಾವಿಯಿಂದ ಬೆಂಗಳೂರಿಗೆ ತೆರಳುತ್ತಿದ್ದಾರೆ. ಸಿಡಿ ಪ್ರಕರಣದಲ್ಲಿ ನನ್ನ ವಿರುದ್ಧ ಸ್ವಪಕ್ಷೀಯ ಮೂವರು ನಾಯಕರು ಷಡ್ಯಂತ್ರ ಮಾಡಿದ್ದಾರೆ. ಸಿಡಿ ಷಡ್ಯಂತ್ರದ ಹಿಂದೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಜೊತೆಗೆ ಸ್ವಪಕ್ಷದ ಇಬ್ಬರು ಪ್ರಭಾವಿ ಮಂತ್ರಿಗಳು ಹಾಗೂ ಪಕ್ಷದ ಉನ್ನತ ಸ್ಥಾನದಲ್ಲಿರುವ ಮತ್ತೋರ್ವ ನಾಯಕ ಕೈಜೋಡಿಸಿದ್ದು, ಸ್ವಪಕ್ಷಿಯರ ವಿರುದ್ಧ ರಮೇಶ್ ಜಾರಕಿಹೊಳಿಗೆ ದೂರು ನೀಡಲಿದ್ದಾರೆ.
ಅಲ್ಲದೆ ತಕ್ಷಣವೇ ಸಿಡಿ ಪ್ರಕರಣದಿಂದ ಪಾರಾಗಲು ಕ್ರಮವಹಿಸುವಂತೆ ಕೋರಲಿದ್ದಾರೆ. ರಮೇಶ್ ಜಾರಕಿಹೊಳಿ ಅವರಿಗೆ ಇಂದು ಮಹತ್ವದ ದಿನವಾಗಿದ್ದು, ಸಿಡಿ ಪ್ರಕರಣದಿಂದ ರಮೇಶ್ ಪಾರಾಗ್ತಾರಾ ಎಂಬುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : ರೇಖಾ ಕದಿರೇಶ್ ಕೊಲೆ ಪ್ರಕರಣ: ನಾಲ್ವರ ವಶಕ್ಕೆ ಪಡೆದು ಪೊಲೀಸರ ವಿಚಾರಣೆ