ಬೆಳಗಾವಿ : ಮಹಾದಾಯಿ ಯೋಜನೆ ಜಾರಿಗಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ₹200 ಕೋಟಿ ಮೀಸಲಿಟ್ಟಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಮಹದಾಯಿ ಯೋಜನೆ ಒಂದು ಹಂತಕ್ಕೆ ಬಂದಿದೆ. ಫೆಬ್ರವರಿ 26ರಂದು ದೆಹಲಿಗೆ ತೆರಳಿ ಕೇಂದ್ರ ಜಲಸಂಪನ್ಮೂಲ ಸಚಿವರನ್ನ ಭೇಟಿ ಮಾಡ್ತೇನೆ. ಶೀಘ್ರವೇ ಮಹದಾಯಿ ಯೋಜನೆ ಜಾರಿಗೆ ನೋಟಿಫಿಕೇಷನ್ ಹೊರಡಿಸುವಂತೆ ಮನವಿ ಮಾಡುತ್ತೇವೆ. ಈಗಾಗಲೇ ಮಹದಾಯಿ ಯೋಜನೆಗೆ 200 ಕೋಟಿ ರೂ. ಮೀಸಲಿಗೆ ಸಿಎಂ ಒಪ್ಪಿದ್ದಾರೆ. ಮೊನ್ನೆ ಸುಪ್ರೀಂಕೋರ್ಟ್ ಆದೇಶಕ್ಕೂ ಮೊದಲೇ ಹಣ ಮೀಸಲಿಡಲಾಗಿದೆ ಎಂದರು.
ಖಾತೆ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಯಾವುದೇ ಖಾತೆಗೆ ಡಿಮ್ಯಾಂಡ್ ಮಾಡಿರಲಿಲ್ಲ. ನೀರಾವರಿ ಯೋಜನೆ ಜಾರಿಗೆ ತರುವಲ್ಲಿ ತಾರತಮ್ಯ ಮಾಡಲ್ಲ. ಎಲ್ಲರಿಗೂ ನ್ಯಾಯ ಒದಗಿಸುತ್ತೇನೆ. ಖಾನಾಪುರ ತಾಲೂಕಿನ ಕಣಕುಂಬಿಗೆ ಶೀಘ್ರದಲ್ಲಿಯೇ ಭೇಟಿ ನೀಡುತ್ತೇನೆ ಎಂದರು. ಗೋವಾ ಸಿಎಂ ಕೋರ್ಟ್ ಮೊರೆ ಹೋಗೋದಾದರೆ ಹೋಗಲಿ. ನಮ್ಮ ಪರ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ. ಕೃಷ್ಣ ಮತ್ತು ಕಾವೇರಿ ನದಿ ನೀರು ಹಂಚಿಕೆ ವಿವಾದ ನ್ಯಾಯಾಲಯದಲ್ಲಿದೆ. ತೀರ್ಪು ಬಂದ ಬಳಿಕ ಆ ಯೋಜನೆ ಜಾರಿಗೆಗೆ ಕ್ರಮವಹಿಸುತ್ತೇನೆ ಎಂದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಕತ್ತಿ- ಜಾರಕಿಹೊಳಿ ಸಹೋದರರು ಒಟ್ಟಾಗಿ ಎದುರಿಸುತ್ತೇವೆ. ಕತ್ತಿ-ಜಾರಕಿಹೊಳಿ ಕುಟುಂಬ ಮೊದಲಿನಿಂದ ಕೂಡಿಯೇ ಇದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಪಕ್ಷ ಬರಲ್ಲ, ಸಂಘಗಳು ಇರುತ್ತವೆ. ನಾನು, ಬಾಲಚಂದ್ರ, ಕತ್ತಿ ಬ್ರದರ್ಸ್ ಕೂಡಿ ಎಲೆಕ್ಷನ್ ಮಾಡ್ತೇವೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ನಾನು ಕೈ ಹಾಕಲ್ಲ ಎಂದರು.
ಶಾಸಕ ಮಹೇಶ್ ಕುಮಟಳ್ಳಿಗೆ ಅನ್ಯಾಯ ಆಗಲು ಬಿಡಲ್ಲ. ಕುಮಟಳ್ಳಿ ತ್ಯಾಗದಿಂದಲೇ ಸರ್ಕಾರ ರಚನೆಯಾಗಿದೆ. ಕುಮಟಳ್ಳಿಗೆ ಭವಿಷ್ಯದಲ್ಲಿ ಇನ್ನೂ ಉತ್ತಮ ಸ್ಥಾನ ಸಿಗಬಹುದು. ನಾನು ಅನ್ಯಾಯ ಮಾಡಿದ್ದೇನೆ ಎಂದು ಕುಮಟಳ್ಳಿ ಹೇಳಿದ್ರೆ ಶಾಸಕ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದರು.