ಬೆಳಗಾವಿ: ಮತ್ತೊಮ್ಮೆ ಯಡಿಯೂರಪ್ಪ ಸಿಎಂ ಆಗಲು ರಮೇಶ್ ಜಾರಕಿಹೊಳಿ ಕಾರಣ ಎಂದು ಕೂಡಲಸಂಗಮದ ಶ್ರೀಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ತಾಲೂಕಿನ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಸರ್ಕಾರದ ಪರವಾಗಿ ಸಚಿವ ರಮೇಶ ಜಾರಕಿಹೊಳಿ ಭೇಟಿ ಸ್ವೀಕರಿಸಲಿದ್ದಾರೆ. ಇಂದು ಸಚಿವ ರಮೇಶ್ ಜಾರಕಿಹೊಳಿಯವರಿಗೆ ಜಲಸಂಪನ್ಮೂಲ ಇಲಾಖೆಯ ಮಹತ್ವದ ಸಭೆ ಇತ್ತು. ಹೀಗಾಗಿ ಅವರು ಬೆಂಗಳೂರಿಗೆ ಹೋಗಬೇಕಿತ್ತು. ಆದರೆ, ನಿನ್ನೆ ನನ್ನ ಭೇಟಿಯಾದಾಗ ಉಪವಾಸ ಸತ್ಯಾಗ್ರಹದ ಬಗ್ಗೆ ತಿಳಿಸಿದ್ದೆ. ಹೀಗಾಗಿ ತಮ್ಮ ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಿ ಇಂದು ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ್ದಾರೆ. ಅವರಿಗೆ ಸಮಾಜದ ಪರವಾಗಿ ತುಂಬ ಹೃದಯದ ಧನ್ಯವಾದಗಳನ್ನು ತಿಳಿಸಿದರು.
ಗೋಕಾಕ್ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಲಿಂಗಾಯತ ಪಂಚಮಸಾಲಿ ಸಮುದಾಯವಿದ್ದು, ನಮ್ಮ ಸಮುದಾಯದ ಬೆಂಬಲವನ್ನು ಪಡೆದು ಗೋಕಾಕ್‌ನಲ್ಲಿ ಸತತವಾಗಿ ಐದು ಬಾರಿ ರಮೇಶ ಜಾರಕಿಹೊಳಿ ಶಾಸಕರಾಗಿದ್ದಾರೆ. ಅದೇ ರೀತಿ ಪಂಚಮಸಾಲಿ ಸಮುದಾಯದ ಮೇಲೂ ರಮೇಶ್ ಜಾರಕಿಹೊಳಿಗೆ ಪ್ರೀತಿ ಇದೆ. ರಮೇಶ್ ಜಾರಕಿಹೊಳಿ ತಾವೇ ಕಿಂಗ್ ಆಗದೇ ಕಿಂಗ್ ಮೇಕರ್ ಆದರು. ಯಡಿಯೂರಪ್ಪರನ್ನ ಕಿಂಗ್ ಮಾಡಿ ರಮೇಶ್ ಜಾರಕಿಹೊಳಿ ಕಿಂಗ್ ಮೇಕರ್ ಆದರು. ಇದು ಯಡಿಯೂರಪ್ಪ ಸೇರಿ ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.