ಬೆಳಗಾವಿ: ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದವನ್ನು ಇತ್ಯರ್ಥಗೊಳಿಸುವುದಾಗಿ ರಮೇಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ.
ಗೋಕಾಕ್‌ನಲ್ಲಿರುವ ಸಚಿವ ರಮೇಶ ಜಾರಕಿಹೊಳಿಯವರ ನಿವಾಸಕ್ಕೆ ಕುರುಬ ಸಂಘದ ನಾಯಕರ ಜೊತೆ ಇಂದು ಆಗಮಿಸಿದ ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ್ ಅವರು ಈ ಕುರಿತು ರಮೇಶ ಜಾರಕಿಹೊಳಿ ಅವರಿಗೆ ಮನವಿ ಮಾಡಿಕೊಂಡಿದ್ದರು.
ಈ ಮನವಿ ಸ್ವೀಕರಿಸಿ ಮಾತನಾಡಿದ ಉಸ್ತುವಾರಿ ಸಚಿವ ಜಾರಕಿಹೊಳಿ, ಬೆಳಗಾವಿಯ ಪೀರನವಾಡಿಯಲ್ಲಿನ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಕುರಿತು ಇರುವ ವಿವಾದವನ್ನು ಗಣೇಶ ನಿಮಜ್ಜನೆಯ ಬಳಿಕ ಇತ್ಯರ್ಥಗೊಳಿಸುವುದಾಗಿ ತಿಳಿಸಿದರು.
ಪೀರನವಾಡಿಯಲ್ಲಿನ ಎರಡು ಸಮುದಾಯಗಳ ಪ್ರಮುಖ ಮುಖಂಡರ ಸಭೆ ನಡೆಸಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ತಾಳ್ಮೆಯಿಂದಿರುವಂತೆ ರಾಯಣ್ಣ ಅಭಿಮಾನಿಗಳಲ್ಲಿ ಸಚಿವರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕುರುಬ ಸಂಘದ ಮುಖಂಡರು ಇದ್ದರು.