ಬೆಳಗಾವಿ: ಕಳೆದ 25 ದಿನಗಳಿಂದ ನನ್ನ ಪುತ್ರಿಯನ್ನು ಒತ್ತೆಯಾಳಾಗಿ ಇಟ್ಟುಕೊಳ್ಳಲಾಗಿದೆ. ಮಾನಸಿಕ ಒತ್ತಡದಲ್ಲಿರುವ ಆಕೆಗೆ ಕೌನ್ಸೆಲಿಂಗ್ ಅಗತ್ಯವಿದೆ. ಹೀಗಾಗಿ ನೇರವಾಗಿ ಮಗಳು ನ್ಯಾಯಾಧೀಶರೆದುರು ಹಾಜರಾಗುವುದು ಬೇಡ ಎಂದು ಸಂತ್ರಸ್ತೆಗೆ ಪೋಷಕರು ಮನವಿ ಮಾಡಿದರು.
ಯುವತಿಯ ತಂದೆ, ತಾಯಿ ಹಾಗು ಸಹೋದರರು ಬೆಳಗಾವಿಯ ಕುವೆಂಪು ನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
'ನನ್ನ ಪುತ್ರಿ ಡಿಕೆಶಿ ಹಿಂಬಾಲಕರ ಒತ್ತೆಯಾಳಾಗಿದ್ದಾಳೆ'
ನನ್ನ ಪುತ್ರಿ ಡಿ.ಕೆ. ಶಿವಕುಮಾರ್ ಹಿಂಬಾಲಕರ ಒತ್ತೆಯಾಳಾಗಿದ್ದಾಳೆ. ಆಕೆಗೆ ಒತ್ತಡ ಹೇರಿ ಏನೇನೋ ಹೇಳಿಸುತ್ತಿದ್ದಾರೆ. ಹೀಗಾಗಿ ಆಕೆ ನೇರವಾಗಿ ನ್ಯಾಯಾಧೀಶರೆದುರು ಹಾಜರಾಗುವುದು ಬೇಡ. ಒಂದು ವೇಳೆ ಆಕೆ ನ್ಯಾಯಾಧೀಶರ ಎದುರು ಹಾಜರಾದರೆ ಡಿಕೆಶಿ ಹೇಳಿದಂತೆ ಹೇಳುತ್ತಾಳೆ. ನ್ಯಾಯಾಧೀಶರು ಆಕೆಯ ಹೇಳಿಕೆ ಪಡೆಯದೇ ನಾಲ್ಕು ದಿನ ನಮಗೆ ಒಪ್ಪಿಸಬೇಕು. ಯಾವ ಪೋಷಕರು ಕೂಡಾ ತಮ್ಮ ಮಕ್ಕಳಿಗೆ ಅನ್ಯಾಯ ಮಾಡುವುದಿಲ್ಲ. ಆಕೆ ಒತ್ತಡದಿಂದ ಹೊರಬಂದ ನಂತರ ನಾವೇ ಆಕೆಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸುತ್ತೇವೆ ಇಲ್ಲವಾದರೆ ನ್ಯಾಯಾಲಯವೇ ಆಕೆಗೆ ಕೌನ್ಸೆಲಿಂಗ್ ಮಾಡಬೇಕು ಎಂದು ಮನವಿ ಮಾಡಿದರು.
ನಾಲ್ಕು ದಿನ ವಿಶ್ರಾಂತಿ ನೀಡಿ ಒತ್ತಡದಿಂದ ಆಕೆಯನ್ನು ಹೊರತರಬೇಕು. ಇದೆಲ್ಲ ನಡೆದರೆ ಆಕೆಗೆ ಸತ್ಯಾಸತ್ಯತೆ ಹೇಳಲು ಸಾಧ್ಯವಾಗುತ್ತದೆ. ಆಕೆಗೆ ಅನ್ಯಾಯವಾಗಿದ್ದನ್ನು ಹೇಳಲು ನಮ್ಮ ವಿರೋಧವಿಲ್ಲ ಎಂದಿದ್ದಾರೆ.
'ರಾಜಕೀಯ ದಾಳವಾದ ಪುತ್ರಿ'
ನಾನು ಮಾಜಿ ಸೈನಿಕ. ದೇಶವನ್ನೇ ಕಾಪಾಡಿದ ನನಗೆ ನನ್ನ ಪುತ್ರಿಯನ್ನು ಕಾಪಾಡುವುದು ದೊಡ್ಡ ಮಾತೇನಲ್ಲ. ನನ್ನ ಪುತ್ರಿಯನ್ನು ರಾಜಕಾರಣಿಗಳು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ. ನನ್ನ ಪುತ್ರಿಯನ್ನು ಸಾಕಿ-ಸಲುಹುವ ಶಕ್ತಿ ನನಗಿದೆ. ದಯವಿಟ್ಟು ರಾಜಕಾರಣಿಗಳು ನನ್ನ ಪುತ್ರಿಯನ್ನು ನಮ್ಮ ಕುಟುಂಬಕ್ಕೆ ಒಪ್ಪಿಸಬೇಕು ಎಂದು ಯುವತಿ ತಂದೆ ಬೇಡಿಕೊಂಡಿದ್ದಾರೆ.
'ಆಕೆಯ ಸ್ನೇಹಿತ ಆಕಾಶ್ ಹೊರತಾಗಿ ಉಳಿದವರ ಪರಿಚಯ ನಮಗಿಲ್ಲ'
ಆಕೆ ಬೆಂಗಳೂರಲ್ಲಿ ಕೆಲಸಮಾಡುತ್ತಿದ್ದಳು. ದೊಡ್ಡ ಪುತ್ರನೂ ಬೆಂಗಳೂರಲ್ಲಿದ್ದು. ಇಬ್ಬರೂ ಜೊತೆಯಾಗಿದ್ದರು. ಆಕೆಯ ಸ್ನೇಹಿತ ಆಕಾಶ್ ಬಿಟ್ಟರೆ ಉಳಿದವರ ಪರಿಚಯ ನಮಗಿಲ್ಲ. ಆಕಾಶ್ ಕೂಡ ಕಳೆದ ಎರಡು ತಿಂಗಳ ಹಿಂದಷ್ಟೇ ಪರಿಚಯವಾಗಿದ್ದು. ನಾವು ಫೋನ್‌ನಲ್ಲಿ ಆತನ ಜೊತೆಗೆ ಮಾತನಾಡಿದ್ದೇವೆ. ಆದರೆ ಉಳಿದ ನರೇಶ್ ಗೌಡ ಸೇರಿದಂತೆ ಇನ್ನಿತರರ ಪರಿಚಯ ನಮಗಿಲ್ಲ. ಉಳಿದವರ ಪರಿಚಯ ಬಗ್ಗೆಯೂ ಆಕೆ ನಮಗೆ ಹೇಳಿಲ್ಲ ಎಂದಿದ್ದಾರೆ.
'ಕನಕಪುರದಲ್ಲಿ ದೂರು ನೀಡಿದರೆ ನಮ್ಮ ಅಪಹರಣವೂ ಆಗುತ್ತಿತ್ತು'
ಸಿಡಿ ಬಿಡುಗಡೆ ಆದಾಗಿಂದ ಆಕೆ ನಮ್ಮ ಸಂಪರ್ಕಕ್ಕೆ ಬಂದಿಲ್ಲ. ಡಿಕೆಶಿ ಹಿಂಬಾಲಕರು ಆಕೆಯ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಸಿಡಿ ಬಿಡುಗಡೆ ಆದ ತಕ್ಷಣವೇ ಆಕೆಯನ್ನು ಡಿಕೆಶಿಯೇ ಗೋವಾಗೆ ಕಳಿಸಿದ್ದಾನೆ. ನಾವು ಬೆಳಗಾವಿಯಲ್ಲಿ ವಾಸವಾಗಿರುವ ಕಾರಣ ಇಲ್ಲಿನ ಎಪಿಎಂಸಿ ಠಾಣೆಯಲ್ಲಿ ಅಪಹರಣ ದೂರು ನೀಡಿದ್ದೇವೆ. ಕನಕಪುರದಲ್ಲಿ ದೂರು ನೀಡಿದರೆ ನಮ್ಮ ಅಪಹರಣವೂ ಆಗುತ್ತಿತ್ತು ಎಂದು ದೂರಿದ್ದಾರೆ.
ಇದನ್ನೂ ಓದಿ : ಯುವತಿ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗುವ ಸಾಧ್ಯತೆ: ಕೋರ್ಟ್ ಬಳಿ ಪೊಲೀಸ್ ಸರ್ಪಗಾವಲು