ಬೆಳಗಾವಿ: ಏ.17ರಂದು ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್ ಹಿನ್ನೆಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒಂದಾಗಿದ್ದಾರೆ.
ಹನುಮಾನ್ ನಗರದಲ್ಲಿರುವ ಕೈ ಅಭ್ಯರ್ಥಿ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಆಗಮಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸತೀಶ್ ಜಾರಕಿಹೊಳಿ ಜೊತೆಗೆ ಕೆಲ ಹೊತ್ತು ಮಾತುಕತೆ ನಡೆಸಿದರು. ಬಳಿಕ ಗ್ರಾಮೀಣ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲು ಒಂದೇ ಕಾರಿನಲ್ಲಿ ಜಾರಕಿಹೊಳಿ ಮತ್ತು ಹೆಬ್ಬಾಳ್ಕರ್ ತೆರಳಿದರು. ಆದ್ರೆ, ಕಳೆದ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಅಂದಿನಿಂದ ಇಲ್ಲಿವರೆಗೆ ಇಬ್ಬರು ನಾಯಕರು ಅಂತರ ಕಾಯ್ದುಕೊಂಡಿದ್ದರು.
ಈ ವೇಳೆ, ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ ಜಾರಕಿಹೊಳಿ, ಇದು ಕಾರ್ಯಕರ್ತರು, ಮತದಾರರೇ ನಿರ್ಧಾರ ಮಾಡುವ ಚುನಾವಣೆ ಇದಾಗಿದೆ. ನಾವು ಎಲ್ಲಾ ಸಮುದಾಯದವರನ್ನ ಭೇಟಿಯಾಗಿ ಸಹಕಾರ ಕೊಡಿ ಎಂದು ಕೇಳಿಕೊಳ್ಳುತ್ತೇವೆ ಎಂದರು.
ಬಿಜೆಪಿ ಮೂರು ಲಕ್ಷ ಅಂತರದಿಂದ ಗೆಲ್ಲುತ್ತೆ ಎಂಬ ಸಿಎಂ ಹೇಳಿಕೆಗೆ, ಚುನಾವಣೆ ಫಲಿತಾಂಶ ಬರುವವರೆಗೂ ಹೇಳಲು ಆಗಲ್ಲ. ಎರಡು ಲಕ್ಷದಿಂದ ಗೆದ್ದರೂ ಗೆಲುವೇ ಒಂದು ವೋಟ್ ದಿಂದ ಗೆದ್ದರೂ ಗೆಲುವೇ ಎನ್ನುವ ಮೂಲಕ ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಬೆಲೆ ಏರಿಕೆ ಮತ್ತು ಆಡಳಿತ ವಿರೋಧಿ ಅಲೆ ಇಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ, ರಾಜ್ಯದಲ್ಲಿ ದೇಶದಲ್ಲಿ ಅವರದೇ ಸರ್ಕಾರದ ಇದೆ. ಯಾವುದೇ ಜವಾಬ್ದಾರಿ ನಂದಲ್ಲ ಎಂದು ಹೇಳಲು ಆಗೋದಿಲ್ಲ. ಬೆಲೆ ಏರಿಕೆ ಯಾವುದೇ ಕಾರಣಕ್ಕೆ ಆದ್ರೂ ಅದಕ್ಕೆ ಬಿಜೆಪಿ ಸರ್ಕಾರವೇ ಕಾರಣವಾಗಲಿದ್ದು, ಕೇಂದ್ರ ಸರ್ಕಾರದ ಏಳು ವರ್ಷದ ವೈಫಲ್ಯವನ್ನ ಜನರೇ ಹೇಳುತ್ತಿದ್ದಾರೆ ಎಂದು ಕೈ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ:
2014 ರಲ್ಲಿ ನಡೆದ ನನ್ನ ಲೋಕಸಭಾ ಚುನಾವಣೆಯನ್ನು ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಎದುರಿಸಿದ್ದೇವೆ. ಈಗ ಅವರು ಬಯಸಿದರೆ ಅವರು ಹೇಳಿದಲ್ಲಿ ಚುನಾವಣಾ ಪ್ರಚಾರ ಮಾಡುತ್ತೇವೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ.
ಉಪಚುನಾವಣೆ ಅಭ್ಯರ್ಥಿ ಮೇಲೆ, ವಿಷಯದ ಮೇಲೆ ಚುನಾವಣೆ ಟರ್ನ್ ಆಗುತ್ತದೆ. ಈಗ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಎಲ್ಲರೂ ಕೂಡಾ ಒಪ್ಪುವಂತಹ ಅಭ್ಯರ್ಥಿ ಆಗಿದ್ದಾರೆ. ಸತೀಶ ಜಾರಕಿಹೊಳಿ ಎಲ್ಲ ಸಮಾಜ, ಭಾಷಿಕರೊಂದಿಗೆ 25 ವರ್ಷದಿಂದ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದಾರೆ. ಬರೀ ತಮ್ಮ ಕ್ಷೇತ್ರಕ್ಕೆ ಸೀಮಿತ ಆಗದೇ ಜಿಲ್ಲೆಯಲ್ಲಿ ವೋಟ್ ಬ್ಯಾಂಕ್ ಇಟ್ಟುಕೊಂಡ ನಾಯಕರಾಗಿದ್ದಾರೆ. ಹೀಗಾಗಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಸಂಪೂರ್ಣ ಸತೀಶ್ ಜಾರಕಿಹೊಳಿ ಅವರ ಹೆಸರಿನ ಮೇಲೆ ಚುನಾವಣೆ ಆಗುತ್ತದೆ.
ನನಗೆ ಮತ್ತು ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೆ ಬಸವಕಲ್ಯಾಣ ಚುನಾವಣೆ ಪ್ರಚಾರಕ್ಕೆ ಹೋಗುವಂತೆ ಹೇಳಿದ್ದಾರೆ. ನೋಡೋಣ ಇಲ್ಲಿನ ಪ್ರಚಾರದ ಕಾರ್ಯ ನೋಡಿಕೊಂಡು ತೀರ್ಮಾನ ಮಾಡ್ತೇವಿ. ಆ ಬಳಿಕ ಬಸವಕಲ್ಯಾಣ ಪ್ರಚಾರಕ್ಕೆ ಹೋಗುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.