ಬೆಳಗಾವಿ/ಬೆಂಗಳೂರು: ರಾಜ್ಯಸಭೆಗೆ ಮರು ಆಯ್ಕೆ ಆಗುವಲ್ಲಿ ವಿಫಲರಾಗಿರುವ ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ದಿಢೀರ್ ಎಂದು ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿರುವುದು ಅಚ್ಚರಿ ಮೂಡಿಸಿದೆ.
ಎರಡನೇ ಅವಧಿಗೆ ರಾಜ್ಯಸಭೆ ಪ್ರವೇಶಿಸಲು ಉತ್ಸುಕರಾಗಿದ್ದ ಡಾ.ಪ್ರಭಾಕರ ಕೋರೆ ರಾಜ್ಯ ಅಷ್ಟೇ ಅಲ್ಲದೇ ದೆಹಲಿ ಮಟ್ಟದ ನಾಯಕರಲ್ಲಿ ಲಾಬಿ ಮಾಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ಡಾ.ಪ್ರಭಾಕರ ಕೋರೆ ಬದಲಿಗೆ ಬಿಜೆಪಿ ನಾಯಕರು ಈರಣ್ಣ ಕಡಾಡಿ ಅವರಿಗೆ ಮಣೆ ಹಾಕಿದ್ದರು. ರಾಜ್ಯಸಭೆ ಪ್ರವೇಶ ಸಾಧ್ಯವಾಗದ ಕಾರಣ ಕೋರೆ ಅವರು ಇದೀಗ ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರಂತೆ.
ಕೇಂದ್ರ ರೈಲ್ವೆ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಅಕಾಲಿಕ ನಿಧನದ ಕಾರಣ ಬೆಳಗಾವಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಚುನಾವಣೆಗೆ ಇನ್ನೂ ದಿನಾಂಕ ಘೋಷಣೆ ಆಗಿಲ್ಲ. ಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್ಗಾಗಿ ಕೋರೆ ಲಾಬಿ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನ ಸದಾಶಿವ ನಗರದಲ್ಲಿರುವ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ ಪ್ರಭಾಕರ ಕೋರೆ ಕೆಲಹೊತ್ತು ಚರ್ಚೆ ನಡೆಸಿದರು. ಈ ವೇಳೆ ಬೆಳಗಾವಿ ಟಿಕೆಟ್ ಬೇಡಿಕೆ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಧಾನ ಪರಿಷತ್ ಸರ್ಕಾರದ ಮುಖ್ಯಕಾರ್ಯದರ್ಶಿ ಮಹಾಂತೇಶ ಕವಟಗಿಮಠ ಕೂಡ ಕೋರೆಗೆ ಸಾಥ್ ನೀಡಿದ್ದರು. ಬೆಳಗಾವಿ ಜಿಲ್ಲಾ ನಾಯಕರ ಭೇಟಿಯಾದ ಬೆನ್ನಲ್ಲೇ ಸಚಿವ ರಮೇಶ್ ಜಾರಕಿಹೊಳಿ ದಿಢೀರ್ ದೆಹಲಿಯತ್ತ ಪ್ರಯಾಣ ಬೆಳೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.