ಚಿಕ್ಕೋಡಿ: ಬೆಳಗಾವಿ ಜಿಲ್ಲೆ ವಿಭಜನೆ ಬಹಳ ದಿನಗಳ ಹಿಂದೆ ಆಗಬೇಕಿತ್ತು. ಆದರೆ ತಾಂತ್ರಿಕ ತೊಂದರೆಯಿಂದ ಆಗಿಲ್ಲ. ಕಳೆದ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಚರ್ಚೆ ಆಗಿತ್ತು. ಆದಷ್ಟು ಬೇಗ ನಮಗೂ ಚಿಕ್ಕೋಡಿ ಜಿಲ್ಲೆ ಆಗಬೇಕು ಎಂಬ ಆಸೆ ಇದೆ ಎಂದು ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಚಿಕ್ಕೋಡಿ ಪಟ್ಟಣದಲ್ಲಿ ಪ್ರತಿಕ್ರಿಯಿಸಿದ ಅವರು, ಚಿಕ್ಕೋಡಿ ಮತ್ತು ಗೋಕಾಕ್ ಬೇಗನೆ ಜಿಲ್ಲೆ ಆಗಬೇಕು ಎಂಬುದು ನನ್ನ ಆಗ್ರಹ ಕೂಡ ಇದೆ. ಚಿಕ್ಕೋಡಿ ಜಿಲ್ಲೆ ಆಗಲು ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಹಕ್ಕುಗಳಿವೆ. ಶಾಂತಿ ಭಂಗವಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ನಾಳೆ ರಾಜ್ಯ ಬಂದ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಕಾರ್ಯಕಾರಣಿ ಕುರಿತು ಒತ್ತು ನೀಡೋಣ ಎಂದರು. ಇನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವ ಸಂದರ್ಭದಲ್ಲಿ ಮಾತನಾಡಿದರು ಗೊತ್ತಿಲ್ಲ. ಮಾತನಾಡಬಾರದಿತ್ತು. ಅದು ಖಂಡನೀಯ ಎಂದರು.
ಲವ್ ಜಿಹಾದ್ ಕಾನೂನು ಬರಬೇಕು. ನಮ್ಮ ಹೆಣ್ಣುಮಕ್ಕಳಿಗೆ ಮದುವೆಯಾದ ತಕ್ಷಣ ತಲಾಖ್ ನೀಡುವುದು ಒಳ್ಳೆಯದಲ್ಲ. ಎಲ್ಲಾ ಹಿಂದೂ ಹಾಗೂ ಮುಸ್ಲಿಂ ಹೆಣ್ಣು ಮಕ್ಕಳಿಗೆ ನ್ಯಾಯಬದ್ಧ ಕಾನೂನು ಬರಬೇಕು ಎಂದು ಹೇಳಿದರು.
ಕೋರ್ ಕಮಿಟಿ, ಕಾರ್ಯಕಾರಣಿ ಸಭೆಯಲ್ಲಿ ಸಲಹೆ ಹಾಗೂ ಸೂಚನೆಗಳ ಬಗ್ಗೆ ಚರ್ಚೆ ನಡೆಯಲಿದೆ. ಮಂತ್ರಿಮಂಡಲ ರಚನೆ ಮಾಡುವುದು ಸಿಎಂ ಪರಮಾಧಿಕಾರ ಮತ್ತು ವರಿಷ್ಠರ ನಿರ್ಣಯ ಎಂದು ಹೇಳಿದರು.