ಬೆಳಗಾವಿ: ಯಡಿಯೂರಪ್ಪ ಅವರನ್ನು ಸಿಎಂ ಮಾಡಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಷರತ್ತು ಹಾಕಿಯೇ ನಾವೆಲ್ಲರೂ ಬಿಜೆಪಿಗೆ ಸೇರಿದ್ದೇವೆ ಎಂದು ಅನರ್ಹ ಶಾಸಕ ರಮೇಶ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ನಡೆದ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿ ನಮ್ಮೆಲ್ಲರನ್ನು ಬಿಡದಿ ರೆಸಾರ್ಟ್ಗೆ ಕರೆದೊಯ್ಯಲಾಗಿತ್ತು. ಇಲ್ಲಿ ಡಿ.ಕೆ. ಶಿವಕುಮಾರ ಅಣತಿಯಂತೆ ಎಲ್ಲರೂ ವರ್ತಿಸುವ ಸ್ಥಿತಿ ಇತ್ತು. ಇದನ್ನು ಸಹಿಸಿಕೊಳ್ಳಲು ನನಗಾಗಲಿಲ್ಲ. ಮೈತ್ರಿ ಸರ್ಕಾರ ರಚನೆಯಾದ ಮೊದಲ ದಿನವೇ ಸರ್ಕಾರ ಉರುಳಿಸುವ ಶಪಥ ಮಾಡಿದ್ದೆ. ಆಗ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದೆ. ಬಳಿಕ ಯಡಿಯೂರಪ್ಪ ಅವರು ಹೈದ್ರಾಬಾದ್ನಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿಸಿದ್ರು. ಆಗ ಯಡಿಯೂರಪ್ಪ ಅವರನ್ನು ಸಿಎಂ ಮಾಡಿದ್ರೆ, ಬಿಜೆಪಿ ಸೇರಬೇಕೆನ್ನುವ ನಮ್ಮ ಷರತ್ತಿಗೆ ಅಮಿತ್ ಶಾ ಒಪ್ಪಿಗೆ ಸೂಚಿಸಿದ್ದರು. ಆನಂತರ ಹಲವು ಪ್ರಯತ್ನದ ಬಳಿಕ ಆಪರೇಷನ್ ಕಮಲ ಸಕ್ಸಸ್ ಆಯಿತು ಎಂದರು.
ಕಾಂಗ್ರೆಸ್ ಪಕ್ಷದ ದುರಂಹಕಾರ ಮನೋಭಾವನೆ, ಡಿಕೆಶಿ ಭ್ರಷ್ಟಾಚಾರ ಹಾಗೂ ಸಿದ್ದರಾಮಯ್ಯ ಅವರ ದುರಾಡಳಿತವೇ ಮೈತ್ರಿ ಸರ್ಕಾರ ಪತನಕ್ಕೆ ಮುಖ್ಯ ಕಾರಣವಾಯಿತು. ಹೀಗಾಗಿ ನಾವು ಅನಿವಾರ್ಯವಾಗಿ ಬಿಜೆಪಿಗೆ ಹೋಗಬೇಕಾಯಿತು. 2018ರ ವಿಧಾನಸಭೆ ರಿಸಲ್ಟ್ ಬಂದ ಕೂಡಲೇ ಗೆದ್ದ ಎಲ್ಲರೂ ಬೆಂಗಳೂರಿಗೆ ಹೋಗಿದ್ದರು. ಸಿದ್ದರಾಮಯ್ಯ ನಂಬಿ ನಾವೆಲ್ಲ ರಾಜಕಾರಣ ಮಾಡುತ್ತಿದ್ದೆವು. ಆದರೆ, ಸಿದ್ದರಾಮಯ್ಯ ಅಂದು ಸೈಡ್‌ಲೈನ್ ಆಗಿದ್ದರು. ಅಂದು ಡಿ ಕೆ ಶಿವಕುಮಾರ್ ಕೈಯಲ್ಲಿ ಕಾಂಗ್ರೆಸ್ ಇತ್ತು. ಇದನ್ನು ನೋಡಿಯೇ ಮೇ 15ರಂದು ಸರ್ಕಾರ ಕೆಡವಲು ತೀರ್ಮಾನ ಮಾಡಿದೆವು ಎಂದು ಆಪರೇಷನ್ ಕಮಲದ ಸೀಕ್ರೆಟ್ ರಿವಿಲ್ ಮಾಡಿದರು.
ಸಿದ್ದರಾಮಯ್ಯರಿಂದ ಜಾರಕಿಹೊಳಿ ಕುಟುಂಬ ಮುಗಿಸುವ ಹುನ್ನಾರ!
ಕಾಂಗ್ರೆಸ್ ಸರ್ಕಾರದ ಸಂದರ್ಭದಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಜಾರಕಿಹೊಳಿ ಕುಟುಂಬ ಮುಗಿಸಲು ಯತ್ನಿಸಿದರು. ಹಿಂದುಳಿದವರಾದ ನಮ್ಮ ಏಳ್ಗೆ ಸಿದ್ದರಾಮಯ್ಯಗೆ ಸಹಿಸಿಕೊಳ್ಳಲು ಆಗಲಿಲ್ಲ. ಆಗ ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಮಧ್ಯೆ ಜಗಳ ಬಂದಿತು. ಹೀಗಾಗಿ ಆಗ ಅನಿವಾರ್ಯವಾಗಿ ನನ್ನ ಸಚಿವರನ್ನಾಗಿ ಮಾಡಿದರು. ನಾನು ಹುಂಬ ಇದ್ದೆ ಅನ್ನೋ ಕಾರಣಕ್ಕೆ ಮೂರು ತಿಂಗಳು ಸಚಿವರನ್ನಾಗಿ ಮಾಡಿ ನಂತರ ಕೆಳಗಿಳಿಸುವ ಪ್ಲ್ಯಾನ್ ಮಾಡಿದ್ದರು. ಬಳಿಕ ನನ್ನ ಪಕ್ಷ ಸಂಘಟನೆ ನೋಡಿ ಸಿದ್ದರಾಮಯ್ಯ ಪಶ್ಚಾತಾಪ ಪಡಬೇಕಾಯಿತು.
ಮೈತ್ರಿ ಸರ್ಕಾರದಲ್ಲಿ ಸಚಿವನಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದಿನವೇ ಸರ್ಕಾರ ಬೀಳಿಸುವ ನಿರ್ಣಯ ತೆಗೆದುಕೊಂಡೆ. ನಾನು ಯಡಿಯೂರಪ್ಪ ಭೇಟಿಯಾದಾಗ ರಮೇಶ್ ನಿಮ್ಮನ್ನು ನಾನು ನಂಬಬಹುದಾ ಅಂದಿದ್ದರು. ಏನೋ ಕುತಂತ್ರ ಇದೆ ಎಂದು ಯಡಿಯೂರಪ್ಪ ಅನ್ಕೊಂಡಿದ್ದರು. ಮುಳುಗಲಿ ತೇಲಲಿ ನನ್ನನ್ನು ನಂಬಿ ಎಂದು ಹೇಳಿದೆ. ಪದೇಪದೆ ಆಪರೇಷನ್ ಕಮಲ ವಿಫಲ ಆಗಿದಕ್ಕೆ ಮರಳಿ ಕಾಂಗ್ರೆಸ್ ಸೇರುವಂತೆ ಆಗ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಹೇಳಿದ್ದರು. ಆದ್ರೂ ಬಿಡದೆ ನಾವು ಯಶಸ್ವಿಯಾದೆವು.
ನನ್ನದು ಬಿಜೆಪಿಯೇ ಕಡೆಯ ಪಕ್ಷ. ಈ ಪಕ್ಷ ಬಿಟ್ಟು ಮುಂದೆ ಯಾವ ಪಕ್ಷಕ್ಕೂ ನಾನು ಹೋಗಲ್ಲ. ಸೋಮವಾರ ಒಂದು ಲಕ್ಷ ಜನರನ್ನ ಸೇರಿಸಿ ನಾಮಪತ್ರ ಸಲ್ಲಿಸುತ್ತೇನೆ. ಬಿಜೆಪಿ ಬಿಟ್ಟು ಹೋಗದಂತೆ ಅಶೋಕ್ ಪೂಜಾರಿಗೆ ರಮೇಶ ಇದೇ ವೇಳೆ ಹೃದಯ ಪೂರ್ವಕವಾಗಿ ಬೇಡಿಕೊಂಡರು. ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಇಲ್ಲೇ ಇರಬೇಕು. ರಾಜಕೀಯ ಭವಿಷ್ಯ ಬಗ್ಗೆ ಚರ್ಚಿಸೋಣ ಎಂದು ಆಹ್ವಾನ ನೀಡಿದರು.