ಬೆಳಗಾವಿ: ಹಿಂದಿನ ವರ್ಷ ಉಂಟಾದ ನೆರೆಯಿಂದಾಗಿ ಮನೆ ಕಳೆದುಕೊಂಡ ರಾಮದುರ್ಗ ತಾಲೂಕಿನ ನೆರೆ ಸಂತ್ರಸ್ತರು, ತಮಗೆ ದೊರೆಯಬೇಕಾದ ಪರಿಹಾರಕ್ಕಾಗಿ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.
ರಾಮದುರ್ಗ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ತಾಲೂಕಿನ ಹಂಪಿಹೊಳಿ, ಅವರಾದಿ ಗ್ರಾಮದ ಸಂತ್ರಸ್ತರು, 2019ರಲ್ಲಿ ಉಂಟಾದ ಭೀಕರ ಜಲಪ್ರಳಯದಲ್ಲಿ ನಾವೆಲ್ಲರೂ ಮನೆ ಕಳೆದುಕೊಂಡಿದ್ದೇವೆ. ಅದಲ್ಲದೆ ಈ ವರ್ಷ ಸುರಿದ ಮಳೆಯಿಂದಾಗಿ ಮತ್ತೆ ಗ್ರಾಮಕ್ಕೆ ನೀರು ನುಗ್ಗಿ ಹಾನಿ ಉಂಟಾಗಿದೆ. ನೆರೆ ಪರಿಹಾರಕ್ಕಾಗಿ ಕಳೆದ ಒಂದು ವರ್ಷದಿಂದ ಹೋರಾಟ ನಡೆಸುತ್ತಿದ್ದರೂ ಸಹ ಯಾವೊಬ್ಬ ಅಧಿಕಾರಿಯೂ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ವರ್ಷದಲ್ಲಿ ಉಂಟಾದ ಪ್ರವಾಹದಲ್ಲಿ ಮನೆ ಕಳೆದುಕೊಂಡವರ ಪೈಕಿ ಕೆಲವರ ಮನೆಗಳನ್ನು ಮಾತ್ರ ಸರ್ವೇ ಮಾಡಲಾಗಿದ್ದು, ಉಳಿದವರ ಮನೆಗಳ ಸಮೀಕ್ಷೆ ಇನ್ನೂ ಸಹ ಆಗಿಲ್ಲ. ಪರಿಹಾರ ಸಿಗುವವರೆಗೂ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದ್ದೇವೆ ಎಂದು ಸಂತ್ರಸ್ತರು ಹೇಳಿದ್ದಾರೆ.
ಪ್ರತಿಭಟನೆ ವೇಳೆ ಮಹಿಳೆಯೋರ್ವಳು ಅಸ್ವಸ್ಥರಾಗಿದ್ದು, ತಕ್ಷಣವೇ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.