ಬೆಳಗಾವಿ: ಜನವರಿ 22ರಂದು ರಾಮಮಂದಿರ ಲೋಕಾರ್ಪಣೆಯ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ದೇಶಾದ್ಯಂತ ಎಲ್ಲ ಹಿಂದೂಗಳ ಮನೆಗೂ ವಿತರಿಸುವ ಅಭಿಯಾನ ನಡೆಯುತ್ತಿದೆ. ಈ ಅಭಿಯಾನದ ಭಾಗವಾಗಿ ಬೆಳಗಾವಿಯಲ್ಲೂ ಮನೆ ಮನೆಗೆ ಮಂತ್ರಾಕ್ಷತೆ ಮುಟ್ಟಿಸುವ ಕಾರ್ಯವನ್ನು ಶ್ರೀರಾಮನ ಮಹಿಳಾ ಭಕ್ತರು ಉತ್ಸಾಹದಿಂದ ಮಾಡುತ್ತಿದ್ದಾರೆ.
ಮಂತ್ರಾಕ್ಷತೆ ತಲುಪಿಸುವ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಜ.1ರಂದು ಬೆಳಗಾವಿಯಲ್ಲಿ ಚಾಲನೆ ಸಿಕ್ಕಿತ್ತು. ಶುಕ್ರವಾರ ಸದಾಶಿವ ನಗರದಲ್ಲಿ ಈ ಅಭಿಯಾನ ನಡೆಯಿತು. ಶ್ರೀರಾಮನ ಮೂರ್ತಿ ಹಿಡಿದುಕೊಂಡು, ಜೈ ಶ್ರೀರಾಮ ಎಂಬ ಜಯಘೋಷ ಮೊಳಗಿಸುತ್ತಾ, ಡೋಲು ಬಾರಿಸುತ್ತಾ ಭಕ್ತಿಯಿಂದ ಹಿಂದೂ ಕಾರ್ಯಕರ್ತರು ಹೆಜ್ಜೆ ಹಾಕಿದರು.
ಮಂತ್ರಾಕ್ಷತೆ ತೆಗೆದುಕೊಂಡು ಬರುವ ಮಹಿಳೆಯರ ಪಾದಪೂಜೆ ಮಾಡಿ ಅವರಿಗೆ ಆರತಿ ಬೆಳಗಿ ಮನೆ ಮಂದಿ ಆತ್ಮೀಯವಾಗಿ ಬರಮಾಡಿಕೊಂಡರು. ರಾಮನ ಮೂರ್ತಿಗೆ ನಮಸ್ಕರಿಸಿ ಭಕ್ತಿಯಿಂದ ಮಂತ್ರಾಕ್ಷತೆ, ಮಾಹಿತಿ ಪತ್ರಕ ಮತ್ತು ರಾಮನ ಭಾವಚಿತ್ರವನ್ನು ಜನರು ಪಡೆದುಕೊಂಡರು. ಈ ವೇಳೆ ಭಕ್ತಿಯ ಜೊತೆಗೆ ಸಂಭ್ರಮ ಮನೆ ಮಾಡಿತ್ತು. ವಿವಿಧ ತಂಡಗಳ ಮೂಲಕ ಈ ಅಭಿಯಾನದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ತೊಡಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ವಿರೇಶ ಕಿವಡಸನ್ನವರ, "ಅಯೋಧ್ಯೆಯಿಂದ ಬಂದಿರುವ ಈ ಪವಿತ್ರ ಅಕ್ಕಿಯನ್ನು ನಾವು ಯಾವಾಗ ಅಯೋಧ್ಯೆಗೆ ಹೋಗುತ್ತೇವೋ ಆಗ ತೆಗೆದುಕೊಂಡು ಹೋಗಿ ಪ್ರಭು ಶ್ರೀರಾಮನಿಗೆ ಸಮರ್ಪಣೆ ಮಾಡುತ್ತೇವೆ" ಎಂದರು.
ವಿಎಚ್ಪಿ ಮುಖಂಡ ಕೃಷ್ಣ ಭಟ್ ಮಾತನಾಡಿ, "ಪ್ರಭು ಶ್ರೀರಾಮಚಂದ್ರನೇ ತಮ್ಮ ಮನೆಗೆ ಬಂದ ರೀತಿಯಲ್ಲಿ ಮಂತ್ರಾಕ್ಷತೆಯನ್ನು ಜನ ಸ್ವಾಗತಿಸುತ್ತಿದ್ದಾರೆ. ತಾಯಂದಿರು ಬಹಳ ಶ್ರದ್ಧೆ, ಖುಷಿಯಿಂದ ಮನೆ ಮನೆಗೆ ಮಂತ್ರಾಕ್ಷತೆ ಮುಟ್ಟಿಸುತ್ತಿದ್ದಾರೆ. ಈ ಅಭಿಯಾನ ಜ.1ರಿಂದ ಆರಂಭವಾಗಿದ್ದು ಜ.15ರವರೆಗೆ ನಡೆಯಲಿದೆ. ಅದೇ ರೀತಿ ಬೆಳಗಾವಿಯ ವ್ಯಾಕ್ಸಿನ್ ಡಿಪೋ ಮತ್ತು ಸರ್ದಾರ್ ಮೈದಾನದಲ್ಲಿ 10 ಸಾವಿರ ಹನುಮಾನ ಚಾಳೀಸ್ ಪಠಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ಉಡುಪಿ ಪೇಜಾವರ ಶ್ರೀ ವಿಜಯಪುರಕ್ಕೆ ಭೇಟಿ: ದಲಿತರ ಮನೆಗಳಿಗೆ ತೆರಳಿ ರಾಮ ಮಂದಿರದ ಮಂತ್ರಾಕ್ಷತೆ ವಿತರಣೆ