ಚಿಕ್ಕೋಡಿ: ರಾಜು ಕಾಗೆ ಪಕ್ಷ ಬಿಡುವುದಿಲ್ಲ. ನಮ್ಮೊಂದಿಗೆ ಇರಲಿದ್ದಾರೆ ಎಂಬ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರ ಹೇಳಿಕೆಯನ್ನು ಮಾಜಿ ಶಾಸಕ ರಾಜು ಕಾಗೆ ತಳ್ಳಿಹಾಕಿದ್ದಾರೆ.
ಈ ಕುರಿತು ಈಟಿವಿ ಭಾರತಕ್ಕೆ ಪತಿಕ್ರಿಯಿಸಿದ ಅವರು, ಪಕ್ಷದಲ್ಲಿ ಕಳೆದ 20 ವರ್ಷಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಪಕ್ಷವನ್ನು ಸಂಘಟಿಸಿದ್ದೇನೆ. ಹೀಗಾಗಿ, ನಿಗಮ ಮಂಡಳಿಯನ್ನು ಒಪ್ಪುವ ಮಾತೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ತಾನು ನಿಗಮ ಮಂಡಳಿ ಸ್ಥಾನ ತಿರಸ್ಕರಿಸಿಲ್ಲ. ಕಾಡಾ ಬದಲಿಗೆ ರಾಜ್ಯ ಮಟ್ಟದಲ್ಲಿ ಕೆಲಸ ಮಾಡಲು ಬೇರೆ ನಿಗಮಕ್ಕೆ ಮನವಿ ಮಾಡಿದ್ದಾರೆ. ನಮ್ಮೊಂದಿಗೆ ಇರಲಿದ್ದಾರೆ ಎಂದು ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ಕೊಟ್ಟಿದ್ದಾರೆ. ಆದರೆ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಮುಂಬರುವ ಉಪ ಚುನಾವಣೆಯಲ್ಲಿ ಕಾಗವಾಡ ವಿಧಾನಸಭಾ ಮತಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುವುದು ಖಚಿತ. ನನ್ನೊಂದಿಗೆ 60 ಸಾವಿರ ಕಾರ್ಯಕರ್ತರಿದ್ದು, ಕ್ಷೇತ್ರದ ಜನ, ಕಾರ್ಯಕರ್ತರು ಸ್ಪರ್ಧಿಸಬೇಕೆಂಬ ಇಚ್ಛೆ ಹೊಂದಿದ್ದಾರೆ. ಹೀಗಾಗಿ, ಸ್ಪರ್ಧೆ ಮಾಡುವುದು ಶತಸಿದ್ಧ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ರಾಜು ಕಾಗೆ ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸರ್ಕಾರ ನೀಡಿರುವ ಕಾಡಾ ಅಧ್ಯಕ್ಷತೆ ಸ್ಥಾನ ಒಪ್ಪಿಕೊಳ್ಳುವ ಮಾತೇ ಇಲ್ಲ. ಉಪ ಚುನಾವಣೆಗೆ ಸ್ಪರ್ಧಿಸುತ್ತೇನೆ. ಕ್ಷೇತ್ರದ ಜನರ ಹಾಗೂ ಕಾರ್ಯಕರ್ತರ ಆಶೀರ್ವಾದ ಇದೆ. ಕಾರ್ಯಕರ್ತರು ಇಂತಹ ಹೇಳಿಕೆಗಳಿಂದ ಗೊಂದಲಕ್ಕೆ ಒಳಗಾಗಬಾರದು ಎಂದು ರಾಜು ಕಾಗೆ ಮನವಿ ಮಾಡಿದ್ದಾರೆ.