ಬೆಳಗಾವಿ : ಮಾರ್ಚ್ 31ರಂದು ನಗರದ ಸಿಪಿಎಡ್ ಮೈದಾನದಲ್ಲಿ ರೈತ ಮಹಾ ಪಂಚಾಯತ್ ಕಾರ್ಯಕ್ರಮ ಆಯೋಜಿಸಲಾಗಿದೆ. ರೈತರ ಈ ಕಾರ್ಯಕ್ರಮಕ್ಕೆ ಪೊಲೀಸರು ಯಾವುದೇ ಕಾರಣಕ್ಕೂ ಅಡ್ಡಿ ಮಾಡಬಾರದು ಎಂದು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಹೇಳಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮೂರು ರೈತ ವಿರೋಧಿ ಕೃಷಿ ನೀತಿ ಸೇರಿ ವಿವಿಧ ಸಮಸ್ಯೆಗಳ ಕುರಿತು ನಾಡಿನ ಜನತೆಗೆ ಅರಿವು ಮೂಡಿಸುವ ಸಲುವಾಗಿ ಮಾ.31ರಂದು ನಗರದ ಸಿಪಿಎಡ್ ಮೈದಾನದಲ್ಲಿ ರೈತ ಮಹಾ ಪಂಚಾಯತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಟಿಕಾಯತ್ ಸೇರಿ 50 ಸಾವಿರಕ್ಕೂ ಅಧಿಕ ಜನ ಆಗಮಿಸುವ ನಿರೀಕ್ಷೆಯಿದೆ ಎಂದರು.
ದೇಶದಲ್ಲಿ ಬೇಕಾದಷ್ಟು ಜನ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ, ನಿನ್ನೆ ಮೊನ್ನೆ ಅಧಿಕಾರಕ್ಕೆ ಬಂದವರು ರೈತ ಹೋರಾಟವನ್ನು ಅಡಗಿಸುತ್ತೇವೆ ಎಂಬ ಹುಚ್ಚು ಭ್ರಮೆಯಲ್ಲಿದ್ದಾರೆ. ರೈತ ಹೋರಾಟ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ.
ಒಂದು ವೇಳೆ ಪೊಲೀಸರು ರೈತ ಹೋರಾಟ ತಡೆಯಲು ಯತ್ನಿಸಿದರೆ ಪರಿಸ್ಥಿತಿ ನಿಯಂತ್ರಣದಲ್ಲಿ ಉಳಿಯುವುದಿಲ್ಲ. ಹೀಗಾಗಿ, ನಾವು ಶಾಂತವಾಗಿ ಸಮಾವೇಶದ ಹೋರಾಟ ಮಾಡುತ್ತಿದ್ದೇವೆ. ಪೊಲೀಸರು ಸಹಕರಿಸಬೇಕು ಎಂದರು.
ದೇಶದಲ್ಲಿ ರೈತರು, ಬಡವರು, ಸಾಮಾನ್ಯ ಜನರು ಯಾವ ಸ್ಥಿಯಲ್ಲಿ ಬದುಕುತ್ತಿದ್ದಾರೆ ಎಂಬುವುದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ. ಅದನ್ನು ಬಿಟ್ಟು ಬುಲೆಟ್ ಟ್ರೈನ್ ಮಾಡ್ತೇನೆ, ಜಿಲ್ಲೆಗೊಂದು ವಿಮಾನ ನಿಲ್ದಾಣ ಮಾಡ್ತೇನೆ. ಅದನ್ನ ಮಾಡ್ತೇನೆ ಇದನ್ನು ಮಾಡ್ತೇನೆ ಅನ್ನೋ ಮೋದಿ ರೈತರು, ದೇಶದ ಜನರ ಬಗ್ಗೆ ಕಾಳಜಿ ವಹಿಸಲಿ ಎಂದರು.
ಯುವಕರಿಗೆ ಉದ್ಯೋಗ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲ : ದೇಶದ ಯುವಕರು ಕೆಲಸವಿಲ್ಲದೆ ಖಾಲಿ ಕೈಲಿದ್ದಾರೆ. ಯುವಕರಿಗೆ ಭವಿಷ್ಯವಿಲ್ಲ. ಬದುಕಲಿಕ್ಕೆ ಏನಾದರೂ ಉದ್ಯೋಗ ನೀಡಬೇಕೆಂದು ರೈತ ಚಳವಳಿ ಜೊತೆಗೆ ಒತ್ತಾಯ ಮಾಡಲಾಗುತ್ತಿದೆ.
ಪ್ರಸ್ತುತ ಬಹುತೇಕ ಯುವಕರು ಕೆಲಸವಿಲ್ಲದೆ ಬದುಕಬೇಕೋ, ಸಾಯಬೇಕೋ ಎಂಬ ಸ್ಥಿತಿಯಲ್ಲಿ ಬದುಕುತಿದ್ದಾರೆ. ಹೀಗಾಗಿ, ರೈತ ಚಳವಳಿ ಯುವಕರ ಚಳವಳಿ ಆಗಬೇಕು. ಗೌರವದಿಂದ ಬದುಕಲು ರೈತರ ಚಳವಳಿ ಮಾಡಲಾಗುತ್ತಿದೆ ಎಂದರು.
ರೈತರ ಮಹಾ ಪಂಚಾಯತ್ ಸಮಾವೇಶಕ್ಕೆ ರೈತ ಮುಖಂಡ ಟಿಕಾಯತ್ ಆಗಮಿಸುತ್ತಿದ್ದಾರೆ. ಧಾರವಾಡದಲ್ಲಿ ಉಳಿದುಕೊಂಡು ನೂರಾರು ವಾಹನಗಳ ಮೂಲಕ ಬೆಳಗಾವಿಗೆ ಆಗಮಿಸಲಿದ್ದಾರೆ. ಚೆನ್ನಮ್ಮ ವೃತ್ತದಿಂದ ಸಿಪಿಎಡ್ ಮೈದಾನದವರೆಗೂ ಮಹಿಳೆಯರು ಕುಂಬಮೇಳದ ಮೂಲಕ ಮೆರವಣಿಗೆ ನಡೆಸಲಿದ್ದಾರೆ ಎಂದು ಬಾಬಾಗೌಡ ಪಾಟೀಲ ತಿಳಿಸಿದರು.