ಅಥಣಿ(ಬೆಳಗಾವಿ): ತಾಲೂಕಿನಾದ್ಯಂತ ಇಂದು ಸಂಜೆ ಅಕಾಲಿಕ ಮಳೆ ಸುರಿದ ಪರಿಣಾಮ ದ್ರಾಕ್ಷಿ ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ತಾಲೂಕಿನ ಅಡಹಳ್ಳಿ, ಕೋಹಳ್ಳಿ, ಐಗಳಿ, ಕೋತನಟ್ಟಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಪರೀತ ಗಾಳಿ ಸಮೇತ ಮಳೆಯಾಗಿದ್ದು, ಒಣದ್ರಾಕ್ಷಿ ನೀರಿನಲ್ಲಿ ನೆನೆದು ಭಾರಿ ಹಾನಿ ಸಂಭವಿಸಿದೆ. ನವೆಂಬರ್- ಅಕ್ಟೋಬರ್ ತಿಂಗಳಿನಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಅಕಾಲಿಕ ಮಳೆಯಿಂದ ಭಾರಿ ನಷ್ಟ ಸಂಭವಿಸಿತ್ತು. ಇದೀಗ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಅದರಲ್ಲಿ ಅಳಿದು ಉಳಿದ ದ್ರಾಕ್ಷಿಯನ್ನು ರೈತರು ಒಣ ಹಾಕಿದ ಸಂದರ್ಭದಲ್ಲಿ ಹಠಾತ್ತನೆ ಮಳೆ ಬಂದ ಪರಿಣಾಮ ಒಣದ್ರಾಕ್ಷಿ ನೀರಿನಲ್ಲಿ ನೆನೆದು ರೈತರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಇನ್ನೇನು ಈ ವಾರದಲ್ಲಿ ಮಾರಾಟವಾಗಬೇಕಿದ್ದ ಒಣದ್ರಾಕ್ಷಿ ಮಳೆ ನೀರಿನಲ್ಲಿ ನೆನೆದ ಪರಿಣಾಮ, ರೈತರನ್ನು ಚಿಂತೆಗೀಡು ಮಾಡಿದೆ. ಕಳೆದ ಒಂದು ವರ್ಷದಿಂದ ಬೆಳೆದ ಬೆಳೆ ಕೊನೆ ಹಂತದಲ್ಲಿ ಈ ರೀತಿ ನಷ್ಟ ಉಂಟಾಗಿರುವುದು, ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.