ಬೆಳಗಾವಿ : ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರವು ಜಗತ್ತು ಮೆಚ್ಚುವ ಕೆಲಸ ಮಾಡಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಶ್ಲಾಘಿಸಿದರು. ನಗರದಲ್ಲಿ ಮಾತನಾಡಿದ ಅವರು, ಮೊದಲನೇ ಅವಧಿಯ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಕೊಟ್ಟಿದೆ. 2ನೇ ಅವಧಿಯಲ್ಲಿ ಕೂಡ ಸರ್ಕಾರ ಜನಪರ ಯೋಜನೆಗಳನ್ನು ಘೋಷಣೆ ಮಾಡಿದೆ. ಜಗತ್ತು ಮೆಚ್ಚುವ ರೀತಿ ಕೋವಿಡ್ -19 ಲಾಕ್ಡೌನ್ ನಿರ್ವಹಿಸಿ, ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರ ಗಮನ ಸೆಳೆದಿದ್ದಾರೆ ಎಂದರು.
ಪಿಎಂ ಕಿಸಾನ್ ಯೋಜನೆಯಡಿ 9.67 ಕೋಟಿ ರೈತರ ಖಾತೆಗೆ ನೇರವಾಗಿ 6 ಸಾವಿರ ಹಣ ಜಮೆ ಹಾಗೂ ತ್ರಿವಳಿ ತಲಾಕ್, 370ನೇ ಸಂವಿಧಾನ ವಿಧಿ ರದ್ದು, ಪೌರತ್ವ ಕಾಯ್ದೆ ತಿದ್ದುಪಡಿ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಮರಣ ದಂಡಣೆ ಶಿಕ್ಷೆ ಸೇರಿದಂತೆ ಜನಸಾಮಾನ್ಯರಿಗೆ ತಲುಪಬಲ್ಲ ಆರ್ಥಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಕೊಡಲಾಗಿದೆ ಎಂದರು.
ಇದಲ್ಲದೇ ರಾಜ್ಯ ಸರ್ಕಾರವೂ ಕೋವಿಡ್-19 ನಿರ್ವಹಣೆಯಲ್ಲಿ ಪ್ರಶಂಸನೀಯ ಕಾರ್ಯ ಮಾಡಿದೆ. ಅದರ ಜೊತೆಗೆ ಜಿಲ್ಲಾಡಳಿತ ಕೈಜೋಡಿಸುವ ಮೂಲಕ ಕೋವಿಡ್-19 ನಿಯಂತ್ರಣಕ್ಕೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ. ಇದೀಗ ಭಾರತ ಸುರಕ್ಷಿತ ಎಂಬುವುದು ಹೊರ ದೇಶದಲ್ಲಿ ನೆಲೆಸಿದ್ದ ನಮ್ಮ ಜನರಿಗೆ ಗೊತ್ತಾಗಿದೆ. ದೇಶದ ಜನ ಜೀವನ ಪಾರಂಪರಿಕವಾಗಿ ಬದಲಾಗಲಿದೆ ಎಂದರು.
ಅಲ್ಲದೇ ಇಂದಿನಿಂದ 200 ರೈಲುಗಳು ಪ್ರಾರಂಭವಾಗಿದ್ದು, ಈಗಾಗಲೇ ಆಯಾ ರಾಜ್ಯಗಳಿಗೆ ರೈಲುಗಳನ್ನು ಬಿಡಲಾಗುತ್ತದೆ ಎಂದರು. ಇನ್ನು ಬ್ಯಾಂಕ್ಗಳು ಸಾಲ ತುಂಬಲು ಜನತೆಗೆ ಒತ್ತಡ ಮತ್ತು ಸಂಕಷ್ಟ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು, ಬ್ಯಾಂಕ್ಗಳಿಗೆ ಎಚ್ಚರಿಕೆ ನೀಡಿದರು. ಈ ವೇಳೆ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಶಾಸಕ ಅನಿಲ ಬೆನಕೆ, ರಾಜೇಂದ್ರ ಹರಕುಣಿ, ಶಶಿಕಾಂತ ಪಾಟೀಲ, ಎಂ ಬಿ ಝಿರಲಿ ಹಾಗೂ ಇತರರು ಉಪಸ್ಥಿತರಿದ್ದರು.