ಬೆಳಗಾವಿ: ಕಿತ್ತೂರು ತಾಲೂಕಿನ ಎ.ಕೆ.ಹುಬ್ಬಳ್ಳಿಯಲ್ಲಿರುವ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ (ರಾಣಿ ಶುಗರ್) ಆಡಳಿತ ಮಂಡಳಿ ಚುನಾವಣೆಯಲ್ಲಿ ಉದ್ಯಮಿ ನಾಸೀರ್ ಬಾಗವಾನ್ ಪೆನಲ್ ಮೇಲುಗೈ ಸಾಧಿಸಿದೆ.
ನಿನ್ನೆ ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆಯ ಮತ ಎಣಿಕೆ ಮುಕ್ತಾಯವಾಗಿದ್ದು, ನಾಸೀರ ಬಾಗವಾನ್ ಪೆನಲ್ನ ಎಲ್ಲಾ 15 ಅಭ್ಯರ್ಥಿಗಳು ಭರ್ಜರಿ ಗೆಲವು ಸಾಧಿಸಿದ್ದಾರೆ. ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಅವರ ಸುಪುತ್ರ ಪ್ರಕಾಶಗೌಡ ಪಾಟೀಲ ಅವರ ನೇತೃತ್ವದ ಪೆನಲ್ ಒಂದು ಸ್ಥಾನವನ್ನು ಕೂಡ ಗೆಲ್ಲದೆ ಹೀನಾಯ ಸೋಲನ್ನು ಅನುಭವಿಸಿದೆ.
ನಿನ್ನೆ ಬೆಳಗ್ಗೆ 9 ಗಂಟೆಯಿಂದ ಆರಂಭವಾದ ಮತದಾನ ಸಂಜೆ 4 ಗಂಟೆಯವರೆಗೆ ನಡೆಯಿತು. ಇದಾದ ನಂತರ ಸಂಜೆ 7 ಗಂಟೆಗೆ ಮತ ಎಣಿಕೆಯ ಕಾರ್ಯ ಆರಂಭಿಸಲಾಗಿತ್ತು. ನಂತರ ಅ ವರ್ಗ, ಬ ವರ್ಗ ಮತ್ತು ಎಸ್ಸಿ ವರ್ಗ ಹಾಗೂ ಎಸ್ಟಿ ವರ್ಗದ ಅಭ್ಯರ್ಥಿಗಳು ಗೆಲವು ತಮ್ಮದಾಗಿಸಿಕೊಳ್ಳುವ ಮೂಲಕ ಉದ್ಯಮಿ ನಾಸೀರ್ ಬಾಗವಾನ್ ಅವರ ಗುಂಪು ಭರ್ಜರಿ ಜಯ ಪಡೆದುಕೊಂಡಿತು.
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ನಡೆದ ಚುನಾವಣೆಯಲ್ಲಿ ಒಟ್ಟು 2,452 ಮತಗಳ ಪೈಕಿ 2,049 ಮತಗಳು ಚಲಾವಣೆಯಾಗಿದ್ದು, ಒಟ್ಟು ಸರಾಸರಿ ಶೇ. 83.6ರಷ್ಟು ಮತದಾನವಾಗಿದೆ. ಉದ್ಯಮಿ ನಾಸೀರ ಬಾಗವಾನ್ ಹಾಗೂ ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲರ ಪುತ್ರ ಪ್ರಕಾಶಗೌಡ ಪಾಟೀಲ ನೇತೃತ್ವದ ಪೆನಲ್ ಸೇರಿ 37 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. 09 ಸಾಮಾನ್ಯ, 02 ಮಹಿಳೆಯರು, 02 ಹಿಂದುಳಿದ ಅಭ್ಯರ್ಥಿಗಳು ಹಾಗೂ ಓರ್ವ ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳು ಸೇರಿ 15 ಜನರ ಆಯ್ಕೆ ನಡೆಯಿತು.
ಈ ಸಕ್ಕರೆ ಕಾರ್ಖಾನೆ ಕಿತ್ತೂರು, ಬೈಲಹೊಂಗಲ, ಖಾನಾಪುರ, ಬೆಳಗಾವಿ ತಾಲೂಕಿನ ರೈತರ ಪಾಲಿಗೆ ಕಾಮಧೇನು ಆಗಿತ್ತು. ಆದ್ರೆ ಇತ್ತೀಚೆಗೆ ಕಾರ್ಖಾನೆಯ ಆಡಳಿತ ಮಂಡಳಿಯ ಕೆಲ ವೈಫಲ್ಯಗಳಿಂದಾಗಿ ಕಾರ್ಖಾನೆ ಸಾಲದ ಸುಳಿಗೆ ಸಿಲುಕಿ ಸಾಕಷ್ಟು ರೈತರ ಕಬ್ಬಿನ ಬಾಕಿ ಬಿಲ್ ನೀಡದೆ ರೈತರನ್ನು ಸಂಕಷ್ಟಕ್ಕೆ ದೂಡಿತ್ತು.
ಗೆದ್ದ ಅಭ್ಯರ್ಥಿಗಳು:
1) ನಾಶೀರುದ್ದೀನ ಬಾಗವಾನ್
2) ಅಶೋಕ ಯಮಕನಮರಡಿ
3) ಅಶೋಕ ಬೆಂಡಿಗೇರಿ
4) ಮಂಜುನಾಥ ಪಾಟೀಲ
5) ಲಕ್ಷಣ ಎಮ್ಮಿ
6) ಸಿದ್ದಪ್ಪ ದೊರೆಪ್ಪನವರ
7) ಭರತೇಶ್ ಶೇಬಣ್ಣವರ
8) ಬಸವರಾಜ ಬೆಂಡಿಗೇರಿ
9) ಜ್ಯೋತಿಬಾ ಹೈಬತ್ತಿ
10) ಬಸವರಾಜ ಪುಂಡಿ
11) ಶಂಕರಗೌಡ ಪಾಟೀಲ
12) ಸಂಜೀವ್ ಹುಬಳ್ಯಪ್ಪನವರ
13) ಸಾವಂತ ಕಿರಬನವರ- ತಿಗಡೊಳ್ಳಿ
14) ಲಕ್ಷ್ಮೀ ನೆಲಗಳಿ
15) ಲಕ್ಷ್ಮೀ ಅರಳಿಕಟ್ಟೆ