ಬೆಳಗಾವಿ : ಅತ್ಯುತ್ತಮ ಸಂಸದೀಯ ನಡೆಯನ್ನು ಹೊಂದಿರುವ ಶಾಸಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಕಾರ್ಯ ಇತರೆ ಶಾಸಕರಿಗೆ ಸ್ಫೂರ್ತಿ ಹಾಗೂ ಪ್ರೇರಣಾದಾಯಕ. ಈ ಮೂಲಕ ವಿಧಾನಸಭೆಯ ಚರ್ಚೆಗಳ ಗುಣಮಟ್ಟ ಹೆಚ್ಚಾಗುತ್ತಾ ಸಾಗಬೇಕು ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದರು.
ವಿಧಾನಸಭೆಗೆ ಹೊಸ ಶಾಸಕರು ಬರಬಹುದು, ಹಳೆಯ ಶಾಸಕರು ಮರು ಚುನಾಯಿತರಾಗಬಹುದು. ಆದರೆ ಸದನದ ಚರ್ಚೆಗಳ ಗುಣಮಟ್ಟ ಎತ್ತರದಲ್ಲಿರಬೇಕು. ಅತ್ಯುತ್ತಮ ಚರ್ಚಾ ಪಟುವಾಗಿರುವ ಆರ್.ವಿ.ದೇಶಪಾಂಡೆ ಅವರು ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸದ ವಿಷಯ. 1983ರಿಂದ ಅವರೊಂದಿಗೆ ಪರಿಚಯ, ಒಡನಾಟ ಪ್ರಾರಂಭವಾಯಿತು. ದೇಶಪಾಂಡೆಗೆ ಯಾವುದೇ ಖಾತೆ ವಹಿಸಿದರೂ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿ ನ್ಯಾಯ ಒದಗಿಸಿದ್ದಾರೆ. ವಿಧಾನಸಭೆಯ ಅಧಿವೇಶನಕ್ಕೆ ಸಕ್ರಿಯವಾಗಿ ಹಾಜರಾಗಿ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಅವರ ನಡೆ ಇತರರಿಗೆ ಅನುಕರಣೀಯ. ಜನಸೇವೆಯ ಪ್ರಾಮಾಣಿಕ ಚಿಂತನೆಯೊಂದಿಗೆ ಅಜಾತಶತ್ರು ಎಂದೂ ಜನಾನುರಾಗಿಯಾದವರು. ದಣಿವಿಲ್ಲದೇ ಕೆಲಸ ಮಾಡುವ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಗುಣಗಾನ ಮಾಡಿದರು.
ದೇಶಪಾಂಡೆ ಮಾತು..: ರಾಜಕಾರಣಿಗಳ ಬಗ್ಗೆ ಜನಾಭಿಪ್ರಾಯ ಬದಲಾಗಿರುವುದು ಕಳವಳದ ಸಂಗತಿ. ಇಂದಿನ ದಿನಗಳಲ್ಲಿ ಸಾರ್ವಜನಿಕ ಜೀವನದಲ್ಲಿ ರಾಜಕಾರಣಿ ಎಂದು ಪರಿಚಯಿಸಿಕೊಳ್ಳಲು ಹಿಂದೇಟು ಹಾಕುವಂತಾಗಿದೆ. ಜನರಿಂದ ಚುನಾಯಿತರಾಗಿ ಬಂದ ನಂತರ ಮಾಡುವ ಕಾರ್ಯಗಳು ಯಾವುದೇ ಸಹಾಯ ಎಂದು ನಾವು ತಿಳಿಯಬಾರದು. ಜನರಿಗೆ ಕೆಲಸ ಮಾಡುವ ಜವಾಬ್ದಾರಿ ಮತ್ತು ಕರ್ತವ್ಯ ನಮ್ಮದು ಎಂದು ಆರ್.ವಿ.ದೇಶಪಾಂಡೆ ಹೇಳಿದರು.
ಶಾಸಕರಾದವರು ಎಲ್ಲಾ ವಿಷಯಗಳ ಮಾಹಿತಿ ಹಾಗೂ ಜ್ಞಾನ ಸಂಪಾದಿಸಿಕೊಳ್ಳಬೇಕು. ಶಾಸನಸಭೆಯ ಗೌರವ, ಶಿಸ್ತು ಕಾಪಾಡಿಕೊಳ್ಳಬೇಕು. ತಾವು ಈ ಮಟ್ಟಕ್ಕೆ ಬರಲು ದೇವರು, ತಂದೆ-ತಾಯಿ, ಹಿರಿಯರು ಹಾಗೂ ಕ್ಷೇತ್ರದ ಜನರ ಆಶೀರ್ವಾದ ಕಾರಣವಾಗಿದೆ. ಕುಟುಂಬದ ಸಹಕಾರವು ದೊಡ್ಡದೆಂದರು.
ಇದನ್ನೂ ಓದಿ: ಹುಬ್ಬಳ್ಳಿ ಕುಡಿಯುವ ನೀರು ಯೋಜನೆ ಕಾಮಗಾರಿ ಮಂದಗತಿ: ಮಾಜಿ ಸಿಎಂ ಶೆಟ್ಟರ್ ಸಿಡಿಮಿಡಿ.. ಸರಿಪಡಿಸುವ ಭರವಸೆ ನೀಡಿದ ಸಚಿವರು!