ಬೆಳಗಾವಿ: ಕೊರೊನಾ ವರದಿ ಬರುವ ಮುನ್ನವೇ ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಯಾದ ವ್ಯಕ್ತಿ ಜಿಲ್ಲೆಯ ಗೋಕಾಕಿನ ಲೋಕೋಪಯೋಗಿ ಇಲಾಖೆ ಕಚೇರಿಗೆ ಭೇಟಿ ನೀಡಿದ್ದು ಆತಂಕ ಹೆಚ್ಚಿಸಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಗೋಕಾಕಿನ ಲೋಕೋಪಯೋಗಿ ಇಲಾಖೆಯ ಕಚೇರಿಯನ್ನೇ ಸೀಲ್ ಡೌನ್ ಮಾಡಲಾಗಿದೆ.
ಲೋಕೋಪಯೋಗಿ ಇಲಾಖೆಯ ಗೋಕಾಕ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಂಬೈನಿಂದ ಮರಳಿದ್ದ ಗೋಕಾಕ ತಾಲೂಕಿನ ಕಲ್ಲೊಳ್ಳಿ ಗ್ರಾಮದ ವ್ಯಕ್ತಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ವರದಿ ಬರುವ ಮುನ್ನವೇ ಇತನನ್ನು ಬಿಡುಗಡೆ ಮಾಡಿ ಜಿಲ್ಲಾಡಳಿತ ಯಡವಟ್ಟು ಮಾಡಿತ್ತು. ಬಿಡುಗಡೆ ಆದ ತಕ್ಷಣವೇ ಈತ ಲೋಕೋಪಯೋಗಿ ಇಲಾಖೆ ಕಚೇರಿಗೆ ಭೇಟಿ ನೀಡಿದ್ದನು.
ಜೂನ್ 2ರಂದು ಕಲ್ಲೊಳ್ಳಿಯ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಕಚೇರಿಗೆ ಸೀಲ್ ಹಾಕಿ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ಈತ ಗ್ರಾಮದ ಬೇರೆ ಬೇರೆ ಮನೆಗಳಿಗೆ ಭೇಟಿ ನೀಡಿದ್ದು, ಆ ಎಲ್ಲ ಕುಟುಂಬಸ್ಥರಿಗೂ ಆತಂಕ ಶುರುವಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನೂ ತಾಲೂಕಾಡಳಿತ ಕ್ವಾರಂಟೈನ್ ಮಾಡಿದೆ.