ಚಿಕ್ಕೋಡಿ : ಗಾವಟಾಣ ಜಾಗವನ್ನು ತೆರವು ಗೊಳಿಸಿ ರಸ್ತೆ ಅಗಲೀಕರಣ ಮಾಡಿ ಎಂದು ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಅಂಕಲಿ ಪಿಡಿಓ ವಿನೋದ ಅಸುಡೆ ಮೂಲಕ ಚಿಕ್ಕೋಡಿ ತಹಶೀಲ್ದಾರ್ ಎಸ್ ಎಸ್ ಸಂಪಗಾವಿ ಅವರಿಗೆ ಮನವಿ ಸಲ್ಲಿಸಿತು.
ಅಂಕಲಿ ಗ್ರಾಮದ ಸಿದ್ದೇಶ್ವರ ನಗರದ ವ್ಯಾಪ್ತಿಗೆ ಬರುವಂತಹ ರಸ್ತೆಯನ್ನು ಖಾಸಗಿ ಜಮೀನುದಾರರು ಒತ್ತುವರಿ ಮಾಡಿದ್ದು, ಇದರ ಬಗ್ಗೆ ಕ್ರಮ ಜರುಗಿಸಿ ನಮಗೆ ಸೂಕ್ತ ರಸ್ತೆ ಕಲ್ಪಿಸಿ ಕೊಡಿ ಎಂದು ಹಲವಾರು ಬಾರಿ ಮನವಿ ಮಾಡಿದರೂ ಕೂಡಾ ರಸ್ತೆ ಅಗಲೀಕರಣವಾಗಿಲ್ಲ. ಈ ರಸ್ತೆಯ ಮೂಲಕ ನಿತ್ಯ ನೂರಾರು ಲಘು ವಾಹನಗಳು ಸಂಚರಿಸುತ್ತಿದ್ದು, ತುಂಬಾ ತೊಂದರೆಯಾಗುತ್ತಿದೆ ಎನ್ನುತ್ತಿದ್ದಾರೆ.
ಕಳೆದ ಆರು ವರ್ಷಗಳಿಂದ ಅಂಕಲಿ ಗ್ರಾಪಂಗೆ ರಸ್ತೆ ಅಗಲೀಕರಣ ಮಾಡಿ ಎಂದು ಹಲವು ಬಾರಿ ಮನವಿ ಮಾಡಿದರೂ ಸಹಿತ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವುದೇ ತೆರನಾದ ಸ್ಪಂದನೆ ಮಾಡುತ್ತಿಲ್ಲ ಎಂದು ಆಕ್ರೋಶಗೊಂಡ ಸಿದ್ದೇಶ್ವರ ಬಡಾವಣೆಯ ಜನರು ಪ್ರತಿಭಟನೆ ಮಾಡಿದರು.