ಬೆಳಗಾವಿ: ರಾಜ್ಯದ ಬಹುಸಂಖ್ಯಾತ ಸಮಾಜ ಪೈಕಿ ಒಂದಾದ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಪ್ರವರ್ಗ 2ಎ ಅಡಿ ಮೀಸಲಾತಿ ನೀಡಬೇಕು ಹಾಗೂ ಕೇಂದ್ರ ಸರ್ಕಾರ ಓಬಿಸಿಯಡಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧ ಎದುರು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಹಾಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಇಂದು ಬೆಳಗ್ಗೆ 9ರಿಂದ ಸಂಜೆ 4.30ರವರೆಗೆ ಒಂದು ದಿನ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದ್ರು.
ಪಂಚಮಸಾಲಿ ಲಿಂಗಾಯತ ಸಮುದಾಯದ ಸಚಿವರು, ಮಾಜಿ ಸಚಿವರು, ಶಾಸಕರು ಸೇರಿದಂತೆ ಹಲವು ಜನಪ್ರತಿನಿಧಿಗಳು ಶ್ರೀಗಳ ಹೋರಾಟಕ್ಕೆ ಬೆಂಬಲ ನೀಡಿದ್ರು. ಮಾಜಿ ಸಚಿವ ಮುರುಗೇಶ್ ನಿರಾಣಿ, ವಿನಯ್ ಕುಲಕರ್ಣಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವರು ಸಾಥ್ ನೀಡಿದ್ರು.
ಪ್ರತಿಭಟನಾ ವೇದಿಕೆಯಲ್ಲಿ ಭಾಷಣ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಸವಾಲೆಸೆದರು. ಇದು ಅಣ್ಣನಿಗೆ ತಂಗಿಯ ಸವಾಲ್. ಪ್ರತಿಷ್ಠೆಗಾಗಿ ಸವಾಲ್ ಅಲ್ಲ, ಸಮಾಜಕ್ಕಾಗಿ ಸವಾಲ್. ಸಿಎಂ ಬಿ.ಎಸ್. ಯಡಿಯೂರಪ್ಪ ನಮ್ಮ ಬೇಡಿಕೆ ಈಡೇರಿಸುತ್ತಾರೆಂಬ ವಿಶ್ವಾಸವಿದೆ. ಒಂದು ವೇಳೆ ಈಡೇರಿಸದಿದ್ರೆ ಮುಂದೆ ಕಾಂಗ್ರೆಸ್ ಸರ್ಕಾರ ಬರುತ್ತೆ. ನಾವು ಲಿಂಗಾಯತ ಪಂಚಮಸಾಲಿ ಸಮುದಾಯದ ಬೇಡಿಕೆ ಈಡೇರಿಸುತ್ತೇವೆ. ಒಂದು ವೇಳೆ ನಿಮ್ಮ ಸರ್ಕಾರದಲ್ಲಿ ಬೇಡಿಕೆ ಈಡೇರಿದ್ರೆ ನಾನು ನಿಮ್ಮ ಮನೆಗೆ ಬೆಳಗಾವಿ ಕುಂದಾ ತಗೆದುಕೊಂಡು ಬರ್ತೀನಿ. ನಮ್ಮ ಸರ್ಕಾರದಲ್ಲಿ ಬೇಡಿಕೆ ಈಡೇರಿದ್ರೆ ನಾಲ್ಕು ಬಂಗಾರದ ಬಳೆ ಕೊಡಿಸಿ ಅಂತಾ ಸವಾಲೆಸೆದರು.
ಮತ್ತೊಂದೆಡೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಮನವಿ ಮಾಡಿದ್ರು. ಈ ವೇಳೆ ನೀನೇ ಬಿಜೆಪಿಗೆ ಬರ್ತಿಯಲ್ಲ ಅಂತಾ ಹೇಳಿದಾಗ ವಿನಯ ಕುಲಕರ್ಣಿ ಕೈ ಮುಗಿದು ನಸುನಕ್ಕರು.
ಬಳಿಕ ಮಾತನಾಡಿದ ವಿನಯ್ ಕುಲಕರ್ಣಿ, ರಮೇಶ್ ಜಾರಕಿಹೊಳಿ ಬಿಜೆಪಿಗೆ ಬರುವಂತೆ ಹೇಳಿದ್ರು, ಬೇಡ ಅಂತಾ ಎಲ್ಲರೆದರು ನಾನು ಕೈ ಮುಗಿದೆ. ನಾನು ಬಿಜೆಪಿ ಸೇರೋ ಬಗ್ಗೆ ಎಲ್ಲಿಯೂ ಚರ್ಚೆ ಆಗಿಲ್ಲ. ನಾನು ನನ್ನ ಹೊಲದಲ್ಲಿ ಗಳೆ ಹೊಡೆಯುತ್ತಾ ಅರಾಮಾಗಿದ್ದೇನೆ ಅಂತಾ ತಿಳಿಸಿದ್ರು.
ಇನ್ನು, ಮಧ್ಯಾಹ್ನ 3.30ರ ಸುಮಾರಿಗೆ ಪ್ರತಿಭಟನಾ ಸ್ಥಳಕ್ಕೆ ಡಿಸಿಎಂ ಲಕ್ಷ್ಮಣ್ ಸವದಿ, ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಸೇರಿದಂತೆ ಹಲವು ನಾಯಕರು ಆಗಮಿಸಿದ್ರು.
ಈ ವೇಳೆ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ನ. 28ರೊಳಗೆ ತಮ್ಮ ಬೇಡಿಕೆ ಈಡೇರಿಸುವಂತೆ ಗಡುವು ನೀಡಿದ್ರು. ಸಿಎಂ ತಮ್ಮ ಅಧಿಕಾರ ಬಳಿಸಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ 3ಬಿಯಲ್ಲಿರುವ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಬೇಕು. ಇಲ್ಲ ಓಬಿಸಿ ಸೇರ್ಪಡೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಲಿಂಗಾಯತ ಪಂಚನಸಾಲಿ ಕುಲಶಾಸ್ತ್ರೀಯ ಅಧ್ಯಯನಕ್ಕೆ ಸಮಿತಿ ರಚಿಸಬೇಕು. ಈ ಮೂರು ಬೇಡಿಕೆ ಪೈಕಿ ಒಂದೂ ಬೇಡಿಕೆ ಈಡೇರದಿದ್ರೆ ಡಿ. 23ರಿಂದ ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ರು.
ಇದೇ ವೇಳೆ ಸ್ವಾಮೀಜಿಗೆ ಕರೆ ಮಾಡಿದ ಸಿಎಂ ಬಿಎಸ್‌ವೈ, ಶ್ರೀಗಳ ಜೊತೆ ಮಾತುಕತೆ ನಡೆಸಿದ್ರು. ಬಳಿಕ ಡಿಸಿಎಂ ಲಕ್ಷ್ಮಣ್ ಸವದಿ ಜೊತೆ ಮಾತನಾಡಿ ಸಮುದಾಯದ ಎಲ್ಲಾ ಶಾಸಕರನ್ನು ಬೆಂಗಳೂರಿಗೆ ಕರೆಯಿಸಿ ಸಭೆ ಮಾಡೋಣ ಅಂತಾ ಸೂಚನೆ ನೀಡಿದ್ರು. ಇದೇ ವಿಷಯವನ್ನು ವೇದಿಕೆಯಲ್ಲಿಯೇ ಡಿಸಿಎಂ ಲಕ್ಷ್ಮಣ್ ಸವದಿ ತಿಳಿಸಿದ್ರು. ಬಳಿಕ ಬೆಳಗ್ಗೆಯಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳಿಗೆ ಡಿಸಿಎಂ ಲಕ್ಷ್ಮಣ್ ಸವದಿ ಎಳನೀರು ಕುಡಿಸುವ ಮೂಲಕ ಉಪವಾಸ ಸತ್ಯಾಗ್ರಹಕ್ಕೆ ಅಂತ್ಯ ಹಾಡಿದರು.
ಇಂದು ನಡೆದ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟದ ಬಿಸಿ ಸರ್ಕಾರಕ್ಕೆ ಮುಟ್ಟಿದ್ದು ಬೇಡಿಕೆ ಈಡೇರಿಕೆ ಭರವಸೆ ಏನೋ ಸಿಕ್ಕಿದೆ. ಆದರೆ, ಇದು ಯಾವಾಗ ಈಡೇರುತ್ತೆ ಎಂಬುದನ್ನು ಕಾದು ನೋಡಬೇಕಿದೆ.