ಚಿಕ್ಕೋಡಿ: ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿಸಲು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಥಣಿ ತಾಲೂಕಿನ ದರೂರ ಗ್ರಾಮದ ಕೃಷ್ಣಾ ನದಿ ದಂಡೆಯಲ್ಲಿ ರೈತರು ಅಹೋರಾತ್ರಿ ಧರಣಿ ಮಾಡಿದರು.
ಬತ್ತುತ್ತಿರುವ ಕೃಷ್ಣಾ ನದಿಗಿಳಿದು ಉರುಳುಸೇವೆ ಮಾಡಿ, ಬಾಯಿ ಬಡಿದುಕೊಂಡು, ಮರಳು ಎರಚಿ ಹಿಡಿಶಾಪ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಅಥಣಿ ತಾಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಜಾನುವಾರುಗಳು ನೀರಿಲ್ಲದೇ ಸಾಯುವ ಸ್ಥಿತಿಯಲ್ಲಿವೆ. ರೈತರು ಕೆಲಸವಿಲ್ಲದೇ ಗುಳೇ ಹೋಗುವಂತಾಗಿದೆ.
ಚುನಾವಣೆಯ ಸಂದರ್ಭವಾದ್ದರಿಂದ ಇದುವರೆಗೂ ಯಾವ ಜನಪ್ರತಿನಿಧಿಗಳು ಬಂದಿಲ್ಲ ಎಂದು ಭಾವಿಸಿದ್ದೆವು. ಚುನಾವಣೆ ಮುಗಿದ ಬಳಿಕವಾದರೂ ಗಮನಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಕೃಷ್ಣಾ ನದಿಗೆ ನೀರು ಬಿಡುವ ಸಲುವಾಗಿ ಎರಡು ದಿನಗಳ ಕಾಲ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಎರಡು ದಿನಗಳ ಒಳಗೆ ಸ್ಪಂದನೆ ದೊರೆಯದಿದ್ದಲ್ಲಿ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ ತಡೆದು ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮರಳಿನಲ್ಲಿ ಸ್ನಾನ ಮಾಡಿ, ಬತ್ತಿದ ನದಿಯಲ್ಲಿ ದೀರ್ಘ ದಂಡ ನಮಸ್ಕಾರ ಹಾಕಿ ವಿಶಿಷ್ಟ ರೀತಿಯಲ್ಲಿ ರೈತರು ಪ್ರತಿಭಟನೆ ಮಾಡಿದರು
.