ಬೆಳಗಾವಿ: ರಾಣಿ ಚೆನ್ನಮ್ಮ ವಿವಿಯನ್ನು ವೀರರಾಣಿ ಚೆನ್ನಮ್ಮಳ ಕರ್ಮಭೂಮಿ ಕಿತ್ತೂರಿಗೆ ಸ್ಥಳಾಂತರ ಮಾಡುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಕಿತ್ತೂರು ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಿತ್ತೂರು ಕಲ್ಮಟ ಮಠದ ಮಡಿವಾಳ ರಾಜ ಯೋಗೀಂದ್ರ ಸ್ವಾಮೀಜಿ ಹಾಗೂ ಬೇಲೂರು ಮಠದ ನಿಜಗುಣಾನಂದ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಸದ್ಯ ವಿವಿಯು ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ವಿವಿ ಇರುವ ಕಾರಣ ಅದರ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ. ಸರ್ಕಾರ ಅನುದಾನ ನೀಡಿದ್ರೂ ಕಟ್ಟಡ ಸೇರಿ ಮೂಲಸೌಕರ್ಯ ವೃದ್ಧಿ ಸಾಧ್ಯವಾಗಿರಲಿಲ್ಲ.
ಈ ಕಾರಣಕ್ಕೆ ಕೆಲ ದಿನಗಳ ಹಿಂದೆಯೇ ರಾಜ್ಯ ಸರ್ಕಾರ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ವಿವಿಗೆ ಜಾಗ ಮಂಜೂರು ಮಾಡಿದೆ. ಇದಕ್ಕೆ ಕಿತ್ತೂರು ಜನತೆ ವಿರೋಧ ವ್ಯಕ್ತಪಡಿಸಿದ್ದಾರೆ.
ಚೆನ್ನಮ್ಮಳ ಕರ್ಮಭೂಮಿಯಲ್ಲಿ ವಿವಿ ಸ್ಥಾಪನೆಗೆ ಪಟ್ಟು ಹಿಡಿದಿದ್ದಾರೆ. ಇಂದು ಸಭೆ ನಡೆಸಿದ ಮಠಾಧೀಶರು ವಿವಿ ಕಿತ್ತೂರು ಸ್ಥಳಾಂತರಕ್ಕಾಗಿ ಆಗ್ರಹಿಸಿ ಶೀಘ್ರವೇ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡುವ ನಿರ್ಣಯ ಕೈಗೊಂಡಿದ್ದಾರೆ.