ಅಥಣಿ : ರಾಜ್ಯ ಸರ್ಕಾರ 1961 ರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ, ರಾಜ್ಯದಾದ್ಯಂತ ಭಾರತಿ ಕಿಸಾನ್ ಸಂಘದ ವತಿಯಿಂದ ಜು.27 ರಿಂದ 31ರ ವರೆಗೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದೆಂದು ಅಥಣಿ ಭಾರತಿ ಕಿಸಾನ್ ಸಂಘದ ಉಪಾಧ್ಯಕ್ಷ ಶ್ರೀಶೈಲ ಜನಗೌಡ ತಿಳಿಸಿದರು.
ರಾಜ್ಯ ಸರ್ಕಾರ ತಂದಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ರಾಜ್ಯದ ಕೃಷಿಕರನ್ನು ಬೀದಿಪಾಲು ಮಾಡುವ ಹಾಗೂ ಉಳ್ಳವರಿಗೆ ಕೃಷಿ ಜಮೀನು ಖರೀದಿಸಿ ತಮ್ಮ ಇಚ್ಛೆಗೆ ತಕ್ಕಂತೆ ಬಳಸುವ ಅಧಿಕಾರ ನೀಡುವ ಕಾನೂನು. ಈ ಕಾಯ್ದೆಯಿಂದ ಮುಂದೆ ಒಂದು ದಿನ ಕೃಷಿ ಚಟುವಟಿಕೆಗಳು ನಿಲ್ಲುವುದು ಹಾಗೂ ರೈತರಿಗೆ ಮಾರಕವಾಗಿದೆ ಎಂದರು.
ಕೆಲವು ರಾಜಕಾರಣಿಗಳು ಹಾಗೂ ಅಧಿಕಾರಿಗಳು ವ್ಯಾಪಾರಸ್ಥರು, ಉದ್ಯಮಿಗಳು ಭೂ ಸುಧಾರಣಾ ಕಾಯ್ದೆ ನಿಯಮ ಉಲ್ಲಂಘನೆ ಮಾಡಿ ಈಗಾಗಲೇ ತಮ್ಮ ಕಪ್ಪು ಹಣದಿಂದ ತಮ್ಮ ಮತ್ತು ತಮ್ಮ ಕುಟುಂಬದ ಹೆಸರಿನಲ್ಲಿ, ಅಲ್ಲದೇ ಬೇನಾಮಿ ಖರೀದಿಸಿರುವ ಅಕ್ರಮ ಜಮೀನುಗಳನ್ನು ಸಕ್ರಮ ಮಾಡಿಕೊಳ್ಳುವ ಉದ್ದೇಶವೇ ಹೊರತು ಮತ್ತೇನು ಇಲ್ಲ. ವಿರೋಧ ಪಕ್ಷಗಳು ಈ ಬಗ್ಗೆ ಕೇವಲ ಸಾಂಕೇತಿಕ ವಿರೋಧ ವ್ಯಕ್ತಪಡಿಸುತ್ತಿದೆ ಹೊರತು ಪ್ರಬಲ ಹೋರಾಟ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.