ಅಥಣಿ: ಸಿಎಎ ಮತ್ತು ಎನ್ಆರ್ಸಿ ಕಾಯ್ದೆ ಜಾರಿ ಖಂಡಿಸಿ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಅಂಬೇಡ್ಕರ್ ಸರ್ಕಲ್ನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಅಥಣಿ ಪಟ್ಟಣದ ಸಂಕೇಶ್ವರ್ ಜೇವರ್ಗಿ ರಾಜ್ಯ ಹೆದ್ದಾರಿಯಲ್ಲಿ ಸಮಾವೇಶಗೊಂಡ ವಿವಿಧ ಸಂಘಟನೆಗಳ ಕಾರ್ಯಕರ್ತರು ಮತ್ತು ಪ್ರತಿಭಟನಾಕಾರರು ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಮತ್ತು ರಾಷ್ಟ್ರದಲ್ಲಿ ನಾವೆಲ್ಲ ಸಹೋದರತ್ವದಿಂದ ಬದುಕು ಸಾಗಿಸುತ್ತಿದ್ದು ಜಾತಿ ಸಂಘರ್ಷ ಹೊತ್ತಿಸುವ ಕಾಯಿದೆ ನಮಗೆ ಬೇಕಾಗಿಲ್ಲ. ನಾವೆಲ್ಲ ಭಾರತೀಯರು, ಒಂದೇ ತಾಯಿಯ ಮಕ್ಕಳಿದ್ದಂತೆ, ದೇಶದಲ್ಲಿ ಇರುವ ಮೂಲಭೂತ ಸೌಲಭ್ಯಗಳ ಕೊರತೆ ಮತ್ತು ಹಸಿವು, ಬಡತನ, ಹಾಗೂ ನಿರುದ್ಯೋಗವನ್ನು ತೊಲಗಿಸುವ ಕಾಯಿದೆ ನಮಗೆ ಅಗತ್ಯ ಇದೆ, ಜನಪರ ಆರ್ಥಿಕ ನೀತಿಯ ಅಗತ್ಯ ಇದೆ, ಕುಸಿಯುತ್ತಿರುವ ಜಿಡಿಪಿ ಸ್ಥಿರತೆ ಕಾಯ್ದುಕೊಳ್ಳುವ ಅಗತ್ಯ ಇದೆ ಎಂದರು.
ಇದೇ ವೇಳೆ ಬಹುಜನ ಕ್ರಾಂತಿ ಮೋರ್ಚಾ, ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಮುಸ್ಲಿಂ ಸಂಘಟನೆಗಳು ನೀಡಿದ ಅಥಣಿ ಬಂದ್ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಮುಂಜಾಗ್ರತಾ ಕ್ರಮವಾಗಿ ಅಥಣಿ ಡಿವೈಎಸ್ಪಿ ಎಸ್.ವಿ.ಗಿರೀಶ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.