ಬೆಳಗಾವಿ: ನಗರದ ಕಾಡಾ ಕಚೇರಿಯಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ ನೇತೃತ್ವದಲ್ಲಿ, ಮಾಜಿ ನಗರ ಸೇವಕ ಅಸೋಸಿಯೇಷನ್ ಪದಾಧಿಕಾರಿಗಳ ಜೊತೆಗೆ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಪರಿಶೀಲನಾ ಸಭೆ ನಡೆಸಲಾಯಿತು.
ಈ ವೇಳೆ, ಕೇಂದ್ರ ಸಚಿವ ಸುರೇಶ ಅಂಗಡಿಗೆ ಮನವಿ ಮಾಡಿಕೊಂಡ ಪದಾಧಿಕಾರಿಗಳು, ಲಾಕ್‍ಡೌನ್‍ನಿಂದ ಸಾಕಷ್ಟು ಜನರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಶೇ.25ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಿರುವ ಕ್ರಮ ಸರಿಯಿಲ್ಲ. ಹೀಗಾಗಿ ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಿದರು.
ಕೊರೊನಾದಿಂದ ಜನರು ಬದುಕುವುದೇ ದುಸ್ಥರವಾಗಿದ್ದು, ಕೈಯಲ್ಲಿ ಕೆಲಸ ಇಲ್ಲದೇ ತಿನ್ನಲು ಅನ್ನವಿಲ್ಲದೇ ಪರದಾಡುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ತೆರಿಗೆ ಹೆಚ್ಚಳ ಕ್ರಮ ಹಿಂಪಡೆದು ಹಳೆಯ ತೆರಿಗೆಯನ್ನೇ ಮುಂದುವರೆಸಬೇಕು ಎಂದರು.
ಕೇಂದ್ರ ಸಚಿವ ಸುರೇಶ ಅಂಗಡಿ ಮಾತನಾಡಿ, ತೆರಿಗೆ ಸಂಬಂಧ ಪಾಲಿಕೆ ಆಯುಕ್ತರ ಜೊತೆ ಚರ್ಚಿಸಿ ಜನರಿಗೆ ಹೊರೆಯಾಗದಂತೆ ಆಸ್ತಿ ತೆರಿಗೆ ತುಂಬಿಕೊಳ್ಳಲು ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.