ಬೆಳಗಾವಿ : ಇಂದು ಪ್ರಕಟವಾಗಿರುವ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾಂಕಾ ಕುಲಕರ್ಣಿ ಶೇ.98.6 ರಷ್ಟು ಅಂಕ ಗಳಿಸುವ ಮೂಲಕ ಇಡೀ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಿಯಾಂಕಾ ಕುಲಕರ್ಣಿ 592 ಅಂಕ ಗಳಿಸಿದ್ದು, ಭೂಗರ್ಭ ಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಅರ್ಥಶಾಸ್ತ್ರ 98, ಇತಿಹಾಸ 98, ರಾಜಕೀಯ ಶಾಸ್ತ್ರ 99, ಇಂಗ್ಲೀಷ್ 99, ಹಿಂದಿ 98 ಅಂಕಗಳನ್ನು ಪಡೆದಿದ್ದಾರೆ. ರಾಜ್ಯಕ್ಕೆ ದ್ವಿತೀಯ ಸ್ಥಾನ ಬಂದಿರುವ ಹಿನ್ನೆಲೆಯಲ್ಲಿ ಪ್ರಿಯಾಂಕಾ ಮನೆಯಲ್ಲಿ ಸಂಭ್ರಮ ಸಡಗರ ಮನೆ ಮಾಡಿತ್ತು. ಈ ವೇಳೆ ತಂದೆ - ತಾಯಿ, ಅಜ್ಜಿ ಸಿಹಿ ತಿನಿಸಿ ಖುಷಿ ಪಟ್ಟರು.
ಬಳಿಕ ನಮ್ಮ ಈಟಿವಿ ಭಾರತ ಜೊತೆಗೆ ಮಾತನಾಡಿದ ಪ್ರಿಯಾಂಕಾ, "ಓದುವುದನ್ನೇ ಅಭ್ಯಾಸವಾಗಿ ಮಾಡಿಕೊಂಡಿದ್ದರಿಂದ ನನಗೆ ಯಾವುದೇ ರೀತಿ ಒತ್ತಡ ಆಗಲಿಲ್ಲ. ಪರ್ಸೆಂಟೇಜ್ ನಿರೀಕ್ಷೆ ಇತ್ತು. ಆದರೆ, ಇಡೀ ರಾಜ್ಯಕ್ಕೆ ನಾನು ಎರಡನೇ ಸ್ಥಾನ ಬರುತ್ತೇನೆ ಎಂದುಕೊಂಡಿರಲಿಲ್ಲ. ತುಂಬಾ ಖುಷಿಯಾಗಿದೆ. ಯುಪಿಎಸ್ಸಿ ಪರೀಕ್ಷೆ ಎದುರಿಸಬೇಕು ಎಂಬ ಗುರಿಯಿದೆ. ನಮ್ಮ ತಂದೆ ತಾಯಿ ನನಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಿದ್ದರು. ನಾನು ಚಿಕ್ಕವಳಿದ್ದಾಗ ಒಂದು ಬಾರಿ ಡಿಸಿಯವರ ಮನೆ ನೋಡಿ ಯುಪಿಎಸ್ಸಿ ಆಸೆ ನನಗೆ ಚಿಗುರೊಡೆಯಿತು ಎಂದರು.
ಬಳಿಕ ಮಾತನಾಡಿದ ವಿದ್ಯಾರ್ಥಿನಿ ತಾಯಿ ದೀಪಾಲಿ, ನಮ್ಮ ಮಗಳು ತುಂಬಾ ಹಾರ್ಡ್ ವರ್ಕ್ ಮಾಡುತ್ತಿದ್ದರು. ಆಕೆಯ ಇಂದಿನ ಸಾಧನೆ ನೋಡಿ ತುಂಬಾ ಹೆಮ್ಮೆ ಎನಿಸುತ್ತಿದೆ. ಜಿಲ್ಲಾಧಿಕಾರಿ ಆಗಬೇಕು ಎಂಬುದು ನಮ್ಮ ಮಹದಾಸೆ ಎಂದರು.
ಇದನ್ನೂ ಓದಿ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿದ್ಯಾರ್ಥಿನಿಯರೇ ಟಾಪರ್ಸ್!
ಇನ್ನು ಪ್ರಿಯಾಂಕಾ ತಂದೆ ಚಿದಂಬರ ಕುಲಕರ್ಣಿ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿದ್ದು, ತಾಯಿ ದೀಪಾಲಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಅಜ್ಜಿ ಕೂಡ ಶಿಕ್ಷಕಿಯಾಗಿ ನಿವೃತ್ತಿಯಾಗಿದ್ದಾರೆ.
ಇದನ್ನೂ ಓದಿ : ದ್ವಿತೀಯ ಪಿಯುಸಿ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೌಶಿಕ್ ಮನದ ಮಾತು
ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ 7,02,067 ವಿದ್ಯಾರ್ಥಿಗಳಲ್ಲಿ 5,24,209 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ. 74.67 ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ಶೇ. 61.22 ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ. 75.89 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.85.71 ರಷ್ಟು ಫಲಿತಾಂಶ ಬಂದಿದೆ. 3,49,901 ಬಾಲಕರು ಪರೀಕ್ಷೆ ಬರೆದಿದ್ದು, ಇದರಲ್ಲಿ 2,41,607 ಬಾಲಕರು ತೇರ್ಗಡೆಯಾಗಿದ್ದಾರೆ. 3,52,166 ಬಾಲಕಿಯರು ಪರೀಕ್ಷೆ ಬರೆದಿದ್ದು 2,82,602 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಇದನ್ನೂ ಓದಿ : 2nd PUC ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರು ಒಮ್ಮೆ ಯೋಚಿಸಿ: ಈ ಬಾರಿ 1 ಮಾರ್ಕ್ಸ್ ವ್ಯತ್ಯಾಸವಾದರೂ ಅಂಕಪಟ್ಟಿಗೆ ಸೇರ್ಪಡೆ