ಬೆಂಗಳೂರು/ಬೆಳಗಾವಿ : 2023ನೇ ಸಾಲಿನ ಕರ್ನಾಟಕ ಸಿವಿಲ್ ನ್ಯಾಯಾಲಯಗಳ ತಿದ್ದುಪಡಿ ವಿಧೇಯಕ ಸೇರಿದಂತೆ 3 ತಿದ್ದುಪಡಿ ವಿಧೇಯಕಗಳನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಲಾಯಿತು. ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್ ಅವರು, 2023ನೇ ಸಾಲಿನ ಕರ್ನಾಟಕ ಉಚ್ಛ ನ್ಯಾಯಾಲಯ ತಿದ್ದುಪಡಿ ವಿಧೇಯಕ ಹಾಗೂ 2023ನೇ ಸಾಲಿನ ಕರ್ನಾಟಕ ಸಿವಿಲ್ ನ್ಯಾಯಾಲಯಗಳ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಮಂಡಿಸಿದರು.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, 2023ನೇ ಸಾಲಿನ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಎರಡನೇ ತಿದ್ದುಪಡಿ ವಿಧೇಯಕ ಮಂಡಿಸಿದರು. ಈ ತಿದ್ದುಪಡಿ ವಿಧೇಯಕಗಳು ಇದೇ ಅಧಿವೇಶನದಲ್ಲಿಯೇ ಚರ್ಚೆಗೆ ಬರಲಿವೆ.
ಕೆರೆ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಚಿಕ್ಕರಂಗನಾಥ, ಕೊಂಗಳ ಮತ್ತು ಮುಡಿಗುಂಡ ಕೆರೆಗಳ ಅಭಿವೃದ್ಧಿಯ 5 ಕಾಮಗಾರಿಗಳಿಗೆ ರಾಜ್ಯ ಸರ್ಕಾರ ರೂ. 10 ಕೋಟಿ ಮಂಜೂರು ಮಾಡಿದೆ. ಈಗಾಗಲೇ ರೂ. 3.38 ಕೋಟಿ ಬಿಡುಗಡೆಯಾಗಿದ್ದು, 2024ರ ಮಾರ್ಚ್ ಅಂತ್ಯಕ್ಕೆ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ವಿಧಾನಸಭೆಯಲ್ಲಿ ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಕೃಷ್ಣಮೂರ್ತಿ ಎ. ಆರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಕೆರೆಗಳು ಒತ್ತುವರಿ ತೆರವುಗೊಳಿಸಿ ಕಾಮಗಾರಿಗಳನ್ನು ಮುಂದುವರಿಸುವಂತೆ ರೈತರು ಮನವಿ ಮಾಡಿದ್ದಾರೆ. ಈ ಕಾರಣದಿಂದ ಕಾಮಗಾರಿ ಪ್ರಗತಿಯು ಕುಂಠಿತಗೊಂಡಿದೆ. ಈ ಕೆರೆಗಳ ಅಚ್ಚುಕಟ್ಟು ಪ್ರದೇಶದ ಮುಂಗಾರು ಬೆಳೆಗಳಿಗೆ ನೀರು ನೀಡಲು ಕಬಿನಿ ನಾಲೆಯಿಂದ ಕೆರೆಗಳಿಗೆ ನೀರು ಹರಿಸಲಾಗಿದೆ.
ಈ 5 ಕಾಮಗಾರಿಗಳ ಗುತ್ತಿಗೆ ಮೊತ್ತ 8.30 ಕೋಟಿ ರೂ. ಆಗಿದೆ. ಹೊಂಗನೂರು ಹೀರೆ ಕೆರೆಯು 732 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. 30 ಕಿ ಮೀ ಕೆನಾಲ್ ನಿರ್ಮಿಸಬೇಕಿದೆ. ಈ ಕೆರೆಯ ಅಭಿವೃದ್ಧಿಗೆ 18 ಕೋಟಿ ರೂ. ಅವಶ್ಯಕತೆ ಇದೆ. ಅನುದಾನ ಲಭ್ಯತೆ ಮೇಲೆ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದಾಗಿ ಸಚಿವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಲಬುರಗಿ ತಾಲೂಕಿನ ಅಫಜಲಪುರ ಮತಕ್ಷೇತ್ರ ವ್ಯಾಪ್ತಿಯ ಫಿರೋಜಾಬಾದ್ ಏತ ನೀರಾವರಿ ಯೋಜನೆಗೆ 2019-20ರಲ್ಲಿ ಸರ್ಕಾರ 2.88 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಏತ ನೀರಾವರಿ ಪುನರುಜ್ಜೀವನಗೊಳಿಸಲು ವಾಸ್ತವವಾಗಿ 15.14 ಕೋಟಿ ಅವಶ್ಯಕವಿದ್ದು, ಅನುದಾನದ ಲಭ್ಯತೆ ಆಧರಿಸಿ ಕಾಮಗಾರಿ ಮಂಜೂರಾತಿ ನೀಡುವುದಾಗಿ ಶಾಸಕ ಪಾಟೀಲ್ ಎಂ. ವೈ ಪ್ರಶ್ನೆಗೆ ಸಚಿವ ಎನ್. ಎಸ್ ಭೋಸರಾಜು ಉತ್ತರಿಸಿದರು.
ಇದನ್ನೂ ಓದಿ : ಏತ ನೀರಾವರಿ ಯೋಜನೆಗಳ ದುರಸ್ತಿ ಕಾರ್ಯ ಶೀಘ್ರ ಪೂರ್ಣ: ಡಿಸಿಎಂ