ಬೆಳಗಾವಿ: ಮೇ 25 ರ ನಂತರ ದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕೀಯ ಧೃವೀಕರಣ ಆಗಲಿದೆ. ಈಗ ಕೆಂಪು ಲೈಟ್ ಹಾಕಿಕೊಂಡು ಓಡಾತ್ತಿರುವವರು ಕೆಲವೇ ದಿನಗಳಲ್ಲಿ ಮಾಜಿ ಆಗಲಿದ್ದಾರೆ ಎಂದು ಕಾಂಗ್ರೆಸ್ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಕೆಎಂಎಫ್ ನೂತನ ನಿರ್ದೇಶಕ ಅಮರನಾಥ್ ಜಾರಕಿಹೊಳಿ ಅವರಿಗೆ ಗೋಕಾಕ್ನಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೆಂಪು ದೀಪಕ್ಕೆ ಯಾರೂ ಹೆದರುವ ಅವಶ್ಯಕತೆ ಇಲ್ಲ. ಮುಂದೆ ನಮಗೆ ಅಧಿಕಾರ ಸಿಗಲಿದೆ. ವಿಶ್ವಾಸದ್ರೋಹಿ, ಬೆನ್ನಿಗೆ ಚೂರಿ ಹಾಕುವವರನ್ನು ನಂಬಬೇಡಿ ಎಂದು ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ರಮೇಶ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಮತ್ತೆ ಒಂದೇ ವೇದಿಕೆಯಲ್ಲಿ ರಮೇಶ್-ಮಹೇಶ್ ಕುಮಟಳ್ಳಿ:
ಕಾಂಗ್ರೆಸ್ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.
ಸಮಾರಂಭದಲ್ಲಿ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.
ಈ ಹಿಂದೆ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಸೇರಿ ನಾಲ್ವರು ಅತೃಪ್ತ ಶಾಸಕರು ಮುಂಬೈ ಹೋಟೆಲ್‌ವೊಂದರಲ್ಲಿ ನೆಲೆಸಿದ್ದರು. ಅಲ್ಲದೇ ಮೊದಲಿನಿಂದಲೂ ರಮೇಶ್ ಬಣದಲ್ಲಿ ಮಹೇಶ್ ಕುಮಟಳ್ಳಿ ಕಾಣಿಸಿಕೊಂಡಿದ್ದರು.