ಬೆಳಗಾವಿ : ಶಿಕ್ಷಣವನ್ನು ಇಸ್ಲಾಮೀಕರಣ ಮಾಡುವ ಹುನ್ನಾರ ನಡೆದಿದೆ. ಸರ್ಕಾರ ಇದಕ್ಕೆ ಅವಕಾಶ ನೀಡಬಾರದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಪ್ರಕರಣ ಎರಡು ತಿಂಗಳಿಂದ ನಡೆಯುತ್ತಿದೆ. ಆಗಲೇ ವಿದ್ಯಾರ್ಥಿನಿಯರನ್ನು ಅಮಾನತು ಮಾಡಿದ್ದರೆ ರಾಜ್ಯವ್ಯಾಪಿ ವಿಸ್ತಾರ ಆಗುತ್ತಿರಲಿಲ್ಲ. ಹಿಜಾಬ್ ಬಗ್ಗೆ ನಿಮಗೆ ಹಕ್ಕು, ಸ್ವಾತಂತ್ರ್ಯ ಇರಬಹುದು.
ಅದು ಕಾಲೇಜಿನ ಹೊರಗಡೆ ಇರಬೇಕೇ ಹೊರತು ಕಾಲೇಜಿನ ಒಳಗಲ್ಲ. ಕಾಲೇಜಿನ ನೀತಿ, ನಿಯಮಗಳನ್ನು ಪಾಲಿಸಬೇಕು. ಕಾಲೇಜಿನ ಆವರಣದಲ್ಲಿದ್ದಾಗ ಹಿಜಾಬ್, ಬುರಕಾ ಹಾಕುತ್ತೇನೆ ಅಂದರೆ ನಡೆಯಲ್ಲ ಎಂದರು.
ಮುಸ್ಲಿಂ ವಿದ್ಯಾರ್ಥಿನಿಯರ ಹಿಂದೆ ಎಸ್ಡಿಪಿಐ ಮತ್ತು ಪಿಎಫ್ಐ, ಎಂಐಎಂ ಸಂಘಟನೆ ಇದೆ. ಇವರ ನೀಚ ಕೃತ್ಯಕ್ಕೆ ವಿದ್ಯಾರ್ಥಿನಿಯರು ಬಲಿಯಾಗುತ್ತಿದ್ದಾರೆ. ವಿದ್ಯಾರ್ಜನೆಯಿಂದ ಅವರನ್ನು ಬಹಿಷ್ಕಾರ ಮಾಡಬೇಕು.
ಶಿಕ್ಷಣ ಇಸ್ಲಾಮೀಕರಣ ಮಾಡುವುದಕ್ಕೆ ಸರ್ಕಾರ ಅವಕಾಶ ನೀಡಬಾರದು. 6 ಜನ ವಿದ್ಯಾರ್ಥಿನಿಯರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಜಾತ್ರಾ ಮಹೋತ್ಸವಕ್ಕೆ ಅನುಮತಿ ನೀಡಿ : ಇದಕ್ಕೂ ಮುನ್ನ ಜಾತ್ರಾ ಮಹೋತ್ಸವಕ್ಕೆ ಅನುಮತಿ ನೀಡುವಂತೆ ಆಗ್ರಹಿಸಿ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಬೆಳಗಾವಿಯ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಕೋವಿಡ್ ಕಾರಣಕ್ಕೆ ಧಾರ್ಮಿಕ ಕೇಂದ್ರಗಳಿಗೆ ಹೇರಲಾಗಿದ್ದ ನಿರ್ಬಂಧ ತೆರವು ಮಾಡಬೇಕು. ಕೋವಿಡ್ ಮಾರ್ಗಸೂಚಿಗಳನ್ವಯ ಜಾತ್ರಾ ಮಹೋತ್ಸವಕ್ಕೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದ ಪ್ರಮೋದ್ ಮುತಾಲಿಕ್, ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.