ಬೆಳಗಾವಿ: ಬಾಲ್ಯ ವಿವಾಹದ ವಿರುದ್ಧ ಎಷ್ಟೇ ಕಾನೂನುಗಳನ್ನು ಜಾರಿಗೆ ತಂದರೂ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಅಂತಹದ್ದೇ ಎರಡು ಪ್ರಕರಣಗಳು ಬೆಳಗಾವಿಯಲ್ಲಿ ಪತ್ತೆಯಾಗಿವೆ.
ಕಾನೂನಿನಲ್ಲಿ 21 ವರ್ಷ ಮೇಲ್ಪಟ್ಟ ಯುವಕ ಹಾಗೂ 18 ವರ್ಷ ಮೇಲ್ಪಟ್ಟ ಯುವತಿ ಮದುವೆಯಾಗಲು ಅವಕಾಶವಿದೆ. ಇದಕ್ಕಿಂತ ಕಡಿಮೆ ವಯಸ್ಸಿನಲ್ಲಿ ವಿವಾಹವಾದರೆ ಅಂತಹವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ, ಈ ನಿಯಮವನ್ನು ಉಲ್ಲಂಘನೆ ಮಾಡಿ ಬೆಳಗಾವಿಯಲ್ಲಿ ಇಬ್ಬರು ವ್ಯಕ್ತಿಗಳು ಕಡಿಮೆ ವಯಸ್ಸಿನ ಬಾಲಕಿಯರೊಂದಿಗೆ ಮದುವೆಯಾಗಿದ್ದು, ಅವರೀಗ ಗರ್ಭಿಣಿಯಾಗಿದ್ದಾರೆ. ಈ ಸಂಬಂಧ ಮಾಹಿತಿ ಪಡೆದ ಅಧಿಕಾರಿಗಳು ಇಬ್ಬರು ಪತಿ ಮಹಾಶಯರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದೇಗೆ?
ಗರ್ಭಿಣಿಯಾದ ಇಬ್ಬರು ಬಾಲೆಯರು ಹೆರಿಗೆಗೆಂದು ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಎಲ್ಲ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಂದ ಆಧಾರ್ ಕಾರ್ಡ್ ಅನ್ನು ಪಡೆಯಲಾಗುತ್ತದೆ. ಅದರಂತೆ ಆಸ್ಪತ್ರೆಯಲ್ಲಿ ಬಾಲಕಿಯರ ಆಧಾರ್ ಕಾರ್ಡ್ ಪಡೆದಿದ್ದಾರೆ. ಅದರಲ್ಲಿ ಬಾಲಕಿಯರ ಜನ್ಮದಿನವನ್ನು ಗಮನಿಸಿದ ವೈದ್ಯಕೀಯ ಸಿಬ್ಬಂದಿ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತರಾದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ರವಿ ರತ್ನಾಕರ ನೇತೃತ್ವದ ತಂಡ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗರ್ಭಿಣಿಯರನ್ನು ಸಂಪರ್ಕಿಸಿ ಬಾಲ್ಯವಿವಾಹಕ್ಕೆ ಪ್ರಚೋದನೆ ನೀಡಿದವರು ಯಾರು ಎಂದು ಮಾಹಿತಿ ಪಡೆದು ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದ್ದಾರೆ.
108 ಬಾಲ್ಯವಿವಾಹ ತಡೆದ ಅಧಿಕಾರಿಗಳು:
ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಬಾಲ್ಯವಿವಾಹಗಳು ನಡೆಯುತ್ತಿವೆ. ಇದಕ್ಕೆ ಇದೀಗ ಕಡಿವಾಣ ಹಾಕಲು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಮುಂದಾಗಿದ್ದಾರೆ. ಕಳೆದ ವರ್ಷದ ಏಪ್ರಿಲ್‍ನಿಂದ ಡಿಸೆಂಬರ್ನಲ್ಲಿ ಒಟ್ಟು 115 ಬಾಲ್ಯವಿವಾಹದ ದೂರುಗಳು ದಾಖಲಾಗಿದ್ದವು. ಅದರಲ್ಲಿ ಅಧಿಕಾರಿಗಳು ಜಿಲ್ಲೆಯಲ್ಲಿ ಒಟ್ಟು 108 ಬಾಲ್ಯ ವಿವಾಹ ತಡೆದಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ವಿವಾಹ ನಡೆಯುವ ವೇಳೆಯ ದಾಳಿ ನಡೆಸಿರುವ ಅಧಿಕಾರಿಗಳ ಬಾಲೆಯರ ಬಾಳಿಗೆ ಬೆಳಕಾಗಿದ್ದಾರೆ. ಬಾಲೆರಯರ ವಿದ್ಯಾಭ್ಯಾಸ ಮುಂದುವರೆಸಿ ಎಂದೂ ಅಧಿಕಾರಿಗಳು ಕುಟುಂಬಸ್ಥರಿಗೆ ಮನವೊರಿಕೆ ಮಾಡಿದ್ದಾರೆ.
ಈ ಕುರಿತು ಈಟಿವಿ ಭಾರತಕ್ಕೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ರವಿ ರತ್ನಾಕರ್ ಮಾಹಿತಿ ನೀಡಿದ್ದು, ಬೆಳಗಾವಿಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿರುವುದು ಇದೇ ಮೊದಲು. ಜಿಲ್ಲಾಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಬಾಲ್ಯ ವಿವಾಹ ಮಾಡಿಕೊಂಡ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದೇವೆ. ಮುಂದೆ ಇಂಥ ಘಟನೆಗಳು ನಡೆಯದಂತೆ ಜಿಲ್ಲಾದ್ಯಂತ ಜಾಗೃತಿ ವಹಿಸುತ್ತಿದ್ದೇವೆ ಎಂದರು.