ಬೆಳಗಾವಿ : ನಮ್ಮನಗಲಿದ ಕನ್ನಡ ಚಿತ್ರರಂಗದ ಖ್ಯಾತನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೂ ಬೆಳಗಾವಿಗೂ ಅವಿನಾಭಾವ ನಂಟಿದೆ. ಪುನೀತ್ ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕೇಂದ್ರ ಸವದತ್ತಿಯ ಯಲ್ಲಮ್ಮನಗುಡ್ಡದ ಶ್ರೀ ರೇಣುಕಾದೇವಿಯ ಪರಮ ಭಕ್ತರಾಗಿದ್ದರು.
ಯಲ್ಲಮ್ಮ ದೇವಿ ಸನ್ನಿಧಿಗೆ ಕನ್ನಡ ಚಲನಚಿತ್ರ ರಂಗದ ಹಲವು ನಟ-ನಟಿಯರು ಭೇಟಿ ಕೊಟ್ಟಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೂಡ ರೇಣುಕಾದೇವಿಯ ಭಕ್ತರಾಗಿದ್ದರು.
ಉತ್ತರ ಕರ್ನಾಟಕದಲ್ಲಿ ವಿವಿಧ ಚಿತ್ರಗಳ ಚಿತ್ರೀಕರಣಕ್ಕೆ ಬಂದ ಸಂದರ್ಭದಲ್ಲಿ ಸವದತ್ತಿಯ ಯಲ್ಲಮ್ಮನಗುಡ್ಡಕ್ಕೂ ಭೇಟಿ ನೀಡಿ ತಾಯಿ ಶ್ರೀ ರೇಣುಕಾ ದೇವಿ ದರ್ಶನ ಪಡೆಯುತ್ತಿದ್ದರು. ಈ ವೇಳೆ ಅಭಿಮಾನಿಗಳೊಂದಿಗೆ ಸರಳವಾಗಿ ಬೆರೆಯುತ್ತಿದ್ದರು. ಅಭಿಮಾನಿಗಳು ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ಪಡುತ್ತಿದ್ದರು.
2019ರ ಜುಲೈ 2ರಂದು ಯಲ್ಲಮ್ಮನಗುಡ್ಡಕ್ಕೆ ಬಂದು ದರ್ಶನ ಪಡೆದಿದ್ದರು. ನಾಡಿನ ಜನರ ಒಳಿತಿಗಾಗಿ ಪ್ರಾರ್ಥಿಸಿ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಈ ಹಿಂದೆ ರಾಜಕುಮಾರ್, ಅವರ ಪತ್ನಿ ಪಾರ್ವತಮ್ಮ ರಾಜಕುಮಾರ್ ಗುಡ್ಡಕ್ಕೆ ಬರುತ್ತಿದ್ದರು.
ಅವರ ಮೂವರು ಪುತ್ರರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಹಾಗೂ ಕುಟುಂಬಸ್ಥರು ಸಹ ಈ ಸನ್ನಿಧಾನಕ್ಕೆ ಭೇಟಿ ನೀಡಿದ್ದರು. ರಾಜಕುಮಾರ್ ಇಡೀ ಕುಟುಂಬವೇ ಆದಿಶಕ್ತಿ ರೇಣುಕಾದೇವಿಗೆ ನಡೆದುಕೊಳ್ಳುತ್ತ ಬಂದಿದೆ.