ಬೆಳಗಾವಿ : ಮಳೆ, ಮಳೆ , ಮಳೆ ಕಳೆದ ಎರಡು ತಿಂಗಳಿನಿಂದ ಕುಂದಾನಗರಿ ಬೆಳಗಾವಿ ಮಳೆಯಿಂದ ತತ್ತರಿಸಿ ಹೋಗಿದೆ. ಜಿಲ್ಲೆಯ ಅನೆಕ ತಾಲೂಕುಗಳು ಪ್ರವಾಹದಿಂದ ಅಕ್ಷರಶಃ ನರಕಯಾತನೆ ಅನುಭವಿಸುತ್ತಿವೆ. ಸಾವಿರಾರು ಜನ ಮನೆ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ನಮ್ಮನಾಳುವ ಜನನಾಯಕರು ಉತ್ಸವದಲ್ಲಿ ಪಾಲ್ಗೊಂಡು ಸಂಕಷ್ಟ ಎದುರಿಸುತ್ತಿರುವ ಜನರನ್ನು ಮರೆತದ್ದು ವಿಪರ್ಯಾಸ.
ಕಳೆದ ಒಂದು ತಿಂಗಳ ಅಂತರದಲ್ಲಿ ಬೆಳಗಾವಿಯಲ್ಲಿ ಎರಡು ಬಾರಿ ಪ್ರವಾಹ ಉಂಟಾಗಿದೆ. ಭೀಕರ ಮಳೆಗೆ ಸಂಪೂರ್ಣ ಜನಜೀವನ ಅಸ್ತವ್ಯಸ್ತವಾಗಿದೆ. ಮನೆ ಮಠ ಕಳೆದುಕೊಂಡು ಜನ ಬೀದಿಗೆ ಬಿದ್ದಿದ್ದಾರೆ. ಜೊತೆಗೆ ಬೆಳೆದ ಬೆಳೆ ಕೈ ಸೇರದೆ ನೀರು ಪಾಲಾದ ರೈತ ಪರಿಹಾರಕ್ಕಾಗಿ ಸರ್ಕಾರದ ಮುಂದೆ ಭಿಕ್ಷೆ ಬೇಡುತ್ತಿರುವ ಸಂದರ್ಭದಲ್ಲಿ ಇದಕ್ಕೂ ನಮಗೂ ಸಂಬಂಧ ಇಲ್ಲದಂತೆ ಎಲ್ಲ ಜನಪ್ರತಿನಿಧಿಗಳು ಉತ್ಸವದ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಹೌದು. ಬೆಳಗಾವಿ ಜಿಲ್ಲೆಯ ಕಿತ್ತೂರು ಕೋಟೆಯಲ್ಲಿ ಮೂರು ದಿನಗಳ ಕಾಲ ನಡೆಯುವ ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ಬುಧವಾರ ಚಾಲನೆ ಸಿಕ್ಕಿದೆ. ಪ್ರವಾಹ ಪೀಡಿತ ಊರುಗಳಿಗೆ ತಲೆಯೇ ಹಾಕದ ಸಚಿವರೆಲ್ಲ ನಿನ್ನೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕಿತ್ತೂರು ಉತ್ಸವದ ನೆಪದಲ್ಲಿ ಹಾರ ತುರಾಯಿಗೂ ಯಾವುದೇ ಕೊರತೆ ಇಲ್ಲ. ಆದರೆ, ಉತ್ಸವಗಳ ಹೆಸರಿನಲ್ಲಿ ಸಾರ್ವಜನಿಕರ ಸಮಾರಂಭದಲ್ಲಿ ಕಾಣಿಸಿಕೊಳ್ಳುವ ಉತ್ಸಾಹ ಪ್ರವಾಹಕ್ಕೆ ಒಳಗಾದ ನಿರಾಶ್ರಿತರ ಕಣ್ಣೀರು ಒರೆಸುವಲ್ಲಿ ಯಾಕಿಲ್ಲ ಎಂಬುದು ಸಾರ್ವಜನಿಕರ ಅಳಲು.
ನಿನ್ನೆ ನಡೆದ ಕಿತ್ತೂರು ಉತ್ಸವದಲ್ಲಿ ಉತ್ತರ ಕರ್ನಾಟಕ ಭಾಗದ ಎಲ್ಲ ನಾಯಕರು ಕಾಣಿಸಿಕೊಂಡರು. ಡಿಸಿಎಂ ಲಕ್ಷ್ಮಣ ಸವದಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ ಪಾಟೀಲ್, ಸಚಿವ ಸಿ ಟಿ ರವಿ, ಸಚಿವೆ ಶಶಿಕಲಾ ಜೊಲ್ಲೆ, ಬೆಳಗಾವಿ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಸಂಸದ ಅನಂತ್‍ಕುಮಾರ್ ಹೆಗಡೆ ಹೀಗೆ ಎಲ್ಲರೂ ವೇದಿಕೆಯ ಮೇಲೆ ಕಾಣಿಸಿಕೊಂಡರು. ಆದರೆ, ಅತ್ತ ನೆರೆಯಿಂದ ಬದುಕು ಕಳೆದುಕೊಂಡು ಬೀದಿಗೆ ಬಿದ್ದ ಜನರ ಪಾಡು ನೋಡದ ಜನನಾಯಕರ ಈ ನಡೆ ಎಷ್ಟು ಸಮಂಜಸ ಅನ್ನುವುದೇ ಸದ್ಯದ ಪ್ರಶ್ನೆಯಾಗಿದೆ.