ಬೆಳಗಾವಿ : ಸೆಪ್ಟೆಂಬರ್ 3 ರಂದು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥಸಂಚಲನ ನಡೆಸುವ ಮೂಲಕ ಚುನಾವಣೆ ವೇಳೆ ಶಾಂತಿ ಕಾಪಾಡುವಂತೆ ಜಾಗೃತಿ ಮೂಡಿಸಿದರು.
ಮಹಾನಗರ ಪಾಲಿಕೆ ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ. ಈ ಹಿನ್ನೆಲೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಂಬಂಧ ಇಂದು ಸಂಜೆ 6 ಗಂಟೆಗೆ ಮಾರ್ಕೆಟ್ ಪೊಲೀಸ್ ಠಾಣೆಯಿಂದ ಆರಂಭವಾದ ಪಥಸಂಚಲನಕ್ಕೆ ಡಿಸಿಪಿ ಡಾ.ವಿಕ್ರಮ್ ಆಮ್ಟೆ ಚಾಲನೆ ನೀಡಿದರು.
ಮಾರ್ಗದುದ್ದಕ್ಕೂ ಯಾವುದೇ ಭಯವಿಲ್ಲದೆ, ಮುಕ್ತವಾಗಿ ಮತ ಚಲಾಯಿಸುವಂತೆ ಸಾರ್ವಜನಿಕರಿಗೆ ತಿಳಿಸಿದರು. ಮಾರ್ಕೆಟ್ ಪೊಲೀಸ್ ಠಾಣೆಯಿಂದ ಆರಂಭವಾದ ಪೊಲೀಸ್ ಪಥಸಂಚಲನ ಚವಾಟ ಗಲ್ಲಿ, ಭಡಕಲಗಲ್ಲಿ, ಖಡಕ್ ಗಲ್ಲಿ, ಜಾಲಗಾರ ಗಲ್ಲಿ, ಶಾಸ್ತ್ರಿ ಚೌಕ್, ದರ್ಬಾರ್ ಗಲ್ಲಿ, ಖಂಜರ್ ಗಲ್ಲಿ ಸ್ಕೂಲ್ ರೋಡ್, ಗ್ರೀನ್ ತಾಜ್ ಹೋಟೆಲ್, ಶನಿವಾರ ಕೂಟ, ಮಾಳಿ ಗಲ್ಲಿ, ಕಸಾಯಿ ಗಲ್ಲಿ, ಖಡೇಬಜಾರ್ ಮಾರ್ಗವಾಗಿ ಆಗಮಿಸಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಅಂತ್ಯವಾಯಿತು.
ಪಥಸಂಚಲನದಲ್ಲಿ ಎಸಿಪಿ ಸದಾಶಿವ ಕಟ್ಟಿಮನಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಸೇರಿದಂತೆ ಕೆಎಸ್ಆರ್ಪಿ, ಮಾರ್ಕೆಟ್ ಠಾಣೆ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.