ಅಥಣಿ: ತಾಲೂಕಿನಲ್ಲಿ ಕಳೆದ ಮೂರು ತಿಂಗಳಿನಿಂದ ಸುಮಾರು 20ಕ್ಕೂ ಹೆಚ್ಚು ಸರಣಿ ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ. ಪೊಲೀಸ್ ಇಲಾಖೆ ಪ್ರಕರಣ ಭೇದಿಸಲು ವಿಫಲವಾಗಿದೆ. ಹಾಗಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಗಮನ ಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅಥಣಿ ತಾಲೂಕಿನ ಝುಂಜರವಾಡ, ಸುಟ್ಟಟ್ಟಿ, ಶಿರಹಟ್ಟಿ, ನಂದಗಾಂವ್, ಸತ್ತಿ, ಕೋಟ್ಟಲಗಿ, ತೇಲಸಂಗ್ ಇನ್ನೂ ಕೆಲವು ಗ್ರಾಮಗಳಲ್ಲಿ ರಾತ್ರಿ ಸಮಯದಲ್ಲಿ ಸರಣಿ ಮನೆಗಳ್ಳತನ ನಡೆದಿದೆ. ಕಳ್ಳತನದಲ್ಲಿ ಗ್ರಾಮಸ್ಥರು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳೆದುಕೊಂಡಿದ್ದಾರೆ.
ಓದಿ:ಕ್ಷುಲ್ಲಕ ಕಾರಣಕ್ಕೆ ಯುವಕರ ಗಲಾಟೆ: ಮನೆಗೆ ನುಗ್ಗಿ ದಾಂಧಲೆ ನಡೆಸಿದ ಜನರು
ಪೊಲೀಸ್ ಇಲಾಖೆಗೆ ಕಬ್ಬಿಣದ ಕಡಲೆಯಾದ ಪ್ರಕರಣ: ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಅಥಣಿ ತಾಲೂಕಿನ ಗ್ರಾಮಗಳನ್ನು ಕಳ್ಳರು ಆಯ್ಕೆ ಮಾಡಿಕೊಂಡು, ರಾತ್ರಿ ಹೊತ್ತಿನಲ್ಲಿ ನಾಲ್ಕು ಅಥವಾ ಐದು ಜನ ಬಂದು ದೇವಸ್ಥಾನ, ಮನೆ, ಅಂಗಡಿಯಲ್ಲಿ ಕಳ್ಳತನ ಮಾಡುತ್ತಿದ್ದಾರೆ. ಬಳಿಕ ಅವರು ಮಹಾರಾಷ್ಟ್ರಕ್ಕೆ ಹೋಗುವುದರಿಂದ ತನಿಖೆ ವಿಳಂಬವಾಗುತ್ತಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ದರೋಡೆಕೋರರು ಗ್ರಾಮಕ್ಕೆ ಕಳ್ಳತನ ಮಾಡಲು ಬಂದಾಗ ಮೊಬೈಲ್ ಬಳಕೆ ಮಾಡುತ್ತಿಲ್ಲ. ಅಲ್ಲದೇ ಸಿಸಿ ಕ್ಯಾಮರಾದಲ್ಲಿ ಸರಿಯಾಗಿ ಚಹರೆ ಕಾಣುತ್ತಿಲ್ಲ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಪ್ರಕರಣ ಭೇದಿಸಲು ಸಿಬ್ಬಂದಿ ಕೊರತೆ: ಬೆಳಗಾವಿ ಜಿಲ್ಲೆಯಲ್ಲಿಯೇ ತುಂಬಾ ವಿಸ್ತಾರವಾಗಿರುವ ಅಥಣಿ ತಾಲೂಕು 70ಕ್ಕೂ ಹೆಚ್ಚು ಗ್ರಾಮಗಳನ್ನು ಹೊಂದಿದೆ. ತಾಲೂಕಿಗೆ ಎರಡು ಹೋಬಳಿ ಕೇಂದ್ರಗಳು, 46 ಗ್ರಾಮ ಪಂಚಾಯಿತಿ ಹೊಂದಿರುವ ತಾಲೂಕಿಗೆ 2 ಪೊಲೀಸ್ ಠಾಣೆ ಇದೆ. ಅದರಲ್ಲೂ ಪೊಲೀಸ್ ಸಿಬ್ಬಂದಿಯ ಕೊರತೆ ಇದಕ್ಕೆ ಪೂರಕವಾಗಿದೆ. ಅಥಣಿ ಪಟ್ಟಣಕ್ಕೆ ಹಾಗೂ ಗ್ರಾಮೀಣ ಭಾಗಕ್ಕೆ ಪ್ರತ್ಯೇಕ ಎರಡು ಪೊಲೀಸ್ ಠಾಣೆ ನೀಡುವಂತೆ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ, ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಭಾಗದಲ್ಲಿ ಹೆಚ್ಚುವರಿ ಪೊಲೀಸ್ ಠಾಣೆ ಸ್ಥಾಪನೆ ಆಗುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.