ಬೆಳಗಾವಿ : ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಬಳಿಕ ನಗರದ ಮಾಲಿನಿ ಸಿಟಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ಕೊಟ್ಟರು. 2,240 ಕೋಟಿ ರೂ ವೆಚ್ಚದಲ್ಲಿ ರೈಲ್ವೇ ಮತ್ತು ಜಲಜೀವನ ಯೋಜನೆಗೆ ಶಂಕು ಸ್ಥಾಪನೆ ಮತ್ತು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಅರ್ಹ ರೈತ ಫಲಾನುಭವಿಗಳಿಗೆ 16 ಸಾವಿರ ಕೋಟಿ ರೂ ಬಿಡುಗಡೆಗೊಳಿಸಿದರು. ನವೀಕರಿಸಿದ ಬೆಳಗಾವಿ ರೈಲ್ವೇ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದರು. ಜೊತೆಗೆ, ಲೋಂಡಾ-ಬೆಳಗಾವಿ-ಘಟಪ್ರಭಾ ಜೋಡಿ ರೈಲ್ವೇ ಮಾರ್ಗದ ಲೋಕಾರ್ಪಣೆ, ಜಲಜೀವನ್ ಅಡಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗೆ ಶಂಕು ಸ್ಥಾಪನೆಯನ್ನು ಪ್ರಧಾನಿ ನೆರವೇರಿಸಿದರು.
ಬಳಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕನ್ನಡದಲ್ಲೇ ತಮ್ಮ ಭಾಷಣ ಆರಂಭಿಸಿದರು. "ಸಬ್ಕಾ ಸಾತ್ ಸಬ್ಕಾ ವಿಕಾಸ್ ಮಂತ್ರಕ್ಕೆ ಸ್ಪೂರ್ತಿಯಾಗಿರುವ ಬಸವೇಶ್ವರರಿಗೆ ನಮಸ್ಕಾರಗಳು. ಬೆಳಗಾವಿಯ ಕುಂದಾ ಮತ್ತು ಬೆಳಗಾವಿಯ ಜನರ ಪ್ರೀತಿ ಎರಡೂ ಮರೆಯಲಾಗದ ಸಿಹಿ. ಬೆಳಗಾವಿಯ ನನ್ನ ಬಂಧು ಭಗಿನಿಯರಿಗೆ ನನ್ನ ನಮಸ್ಕಾರಗಳು" ಎಂದು ಹೇಳಿದರು.
ನಂತರ ಮಾತನಾಡುತ್ತಾ, "ನನಗೆ ಬೆಳಗಾವಿಯ ಜನರ ಪ್ರೀತಿ ಪ್ರಮುಖವಾಗಿದೆ. ಇದರಿಂದ ನಮಗೆ ನಿರಂತರ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಪ್ರೇರಣೆ ಸಿಗುತ್ತಿದೆ. ಬೆಳಗಾವಿ ಮಣ್ಣಿಗೆ ಬರುವುದು ಯಾವುದೇ ತೀರ್ಥಯಾತ್ರೆಗೂ ಕಮ್ಮಿಯಿಲ್ಲ" ಎಂದರು.
ರೈತರಿಗೆ ಹೆಚ್ಚಿನ ಆದ್ಯತೆ: ರಸಗೊಬ್ಬರ, ಕೀಟನಾಶಕ ಕಡಿಮೆ ಬಳಸುವ ರಾಜ್ಯಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ನೆರವು ನೀಡಲಿದೆ. ನಾವು ನಮ್ಮ ಹಿಂದಿನ ಕೃಷಿ ಗಮನಿಸಬೇಕು. ಕರ್ನಾಟಕ ಸಿರಿಧಾನ್ಯದಲ್ಲಿ ದೇಶದಲ್ಲಿಯೇ ಮಹತ್ವ ಪಡೆದಿದೆ. ರೈತ ಬಂಧು ಯಡಿಯೂರಪ್ಪ ಸಿರಿಧಾನ್ಯಕ್ಕೆ ಒತ್ತು ಕೊಟ್ಟಿದ್ದರು. ಈ ಸಿರಿ ಧಾನ್ಯದ ಮಹತ್ವವನ್ನು ವಿಶ್ವಕ್ಕೆ ತೋರಿಸಬೇಕಿದೆ. ಸಿರಿಧಾನ್ಯ ಬೆಳೆಯೋ ರೈತರ ಆದಾಯ ದ್ವಿಗುಣಗೊಳಿಸಬೇಕಿದೆ. ಕಬ್ಬು ಬೆಳೆಗಾರ ರೈತರ ಸಮಸ್ಯೆ ನಿವಾರಿಸುವ ಕೆಲಸ ಮಾಡಿದ್ದೇವೆ. ಇಥೆನಾಲ್ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ. ಇದರಿಂದ ರೈತರ ಕಬ್ಬಿಗೆ ಹೆಚ್ಚಿನ ಆದಾಯ ಸಿಗುತ್ತಿದೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ಆಡಳಿತದಲ್ಲಿ ರೈತರಿಗೆ 15 ಪೈಸೆ ಸಿಗುತ್ತಿತ್ತು: ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ಒಂದು ರೂಪಾಯಿ ಕೊಟ್ಟರೆ ಹದಿನೈದು ಪೈಸೆ ರೈತರಿಗೆ ಸಿಗುತ್ತಿತ್ತು. ಆದರೆ ಇಂದು ಮೋದಿ ಸರ್ಕಾರವಿದೆ. ಇದರಲ್ಲಿ ಯಾವುದೇ ಭ್ರಷ್ಟಾಚಾರ ನಡೆಯಲು ಬಿಡಲ್ಲ. ಹೋಳಿ ಹಬ್ಬಕ್ಕೂ ಮುನ್ನವೇ ಹಣ ಬಿಡುಗಡೆ ಮಾಡಿ ರೈತರಿಗೆ ಹಬ್ಬದ ಶುಭಾಶಯ ಹೇಳುತ್ತಿದ್ದೇನೆ ಎಂದರು.
ಸಣ್ಣ ರೈತರನ್ನೂ ಗಮನದಲ್ಲಿಟ್ಟುಕೊಂಡಿದ್ದೇವೆ. ಬಿಜೆಪಿ ಸರ್ಕಾರದಲ್ಲಿ ಸಣ್ಣ, ಅತಿಸಣ್ಣ ರೈತರಿಗೆ ನ್ಯಾಯ ಸಿಗುವಂತಾಗಿದೆ. ರೈತ ಯಾರ ಮುಂದೆಯೂ ಕೈಯೊಡ್ಡುವ ಪ್ರಸಂಗ ಬರಲ್ಲ. ನಮ್ಮ ಸರ್ಕಾರ ಬಂದ ಮೇಲೆ ಕೃಷಿಗೆ ಆಧುನಿಕತೆಯ ಸ್ಪರ್ಶ ನೀಡುತ್ತಿದ್ದೇವೆ. ನಾವು ಅಧಿಕಾರಕ್ಕೆ ಬಂದಾಗ ಕೃಷಿ ಬಜೆಟ್ 25 ಸಾವಿರ ಕೋಟಿ ಇತ್ತು. ಈಗ ಕೃಷಿ ಬಜೆಟ್ 1.50 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿದೆ. ಐದು ಪಟ್ಟು ಅನುದಾನ ಹೆಚ್ಚಾಗಿದೆ. ಇದರಿಂದ ಬಿಜೆಪಿ ಸರ್ಕಾರ ಕೃಷಿಗೆ ಎಷ್ಟು ಮಹತ್ವ ನೀಡುತ್ತಿದೆ ಎಂದು ಗೊತ್ತಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಗೂ ಜೋಡನೆ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಮಾಹಿತಿ ನೀಡಿದರು.
ಬೆಳಗಾವಿ ರೈಲು ನಿಲ್ದಾಣ: ಬೆಳಗಾವಿ ನವೀಕೃತ ರೈಲು ನಿಲ್ದಾಣ ನೋಡಿದರೆ ಅಭಿಮಾನ ಉಂಟಾಗುತ್ತದೆ ಭಾರತದ ವಿವಿಧೆಡೆ ಇದೇ ಮಾದರಿಯಲ್ಲಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಯಾಗುತ್ತಿದೆ. ಹೊಸ ರೈಲ್ವೆ ಲೈನ್ ಗಳಿಗೂ ಚಾಲನೆ ಸಿಗುತ್ತಿದೆ. ಇದು ಬೆಳಗಾವಿ ಪ್ರವಾಸೋದ್ಯಮದ ದೃಷ್ಟಿಯಲ್ಲಿಯೂ ಮಹತ್ವ ಪಡೆಯಲಿದೆ ಎಂದು ತಿಳಿಸಿದರು. ಡಬಲ್ ಎಂಜಿನ್ ಸರ್ಕಾರ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಜಲಜೀವನ್ ಮಿಷನ್ ಸಾಕ್ಷಿ. ಮನೆ ಮನೆಗೂ ನೀರು ಕಲ್ಪಿಸಲಾಗಿದೆ. ಇನ್ನು ಮುಂದೆ ನೀರಿಗಾಗಿ ಪರದಾಟ ತಪ್ಪುತ್ತದೆ ಎಂದರು.
ಕರ್ನಾಟಕದ ರಾಜಕಾರಣಿಗಳನ್ನು ಅವಮಾನ ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ಕಾಂಗ್ರೆಸ್ ಪರಿವಾರದ ವಿರುದ್ದ ಹೋದರೆ ಅಪಮಾನ ಮಾಡುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌ಗೆ ಕಾಂಗ್ರೆಸ್ ಪರಿವಾರ ಅವಮಾನ ಮಾಡಿತ್ತು ಎಂದರು.
ಇದೇ ಭೂಮಿಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾನು ಗೌರವಿಸುತ್ತೇನೆ. ನನಗೆ ಕೆಲ ದಿನಗಳ ಹಿಂದೆ ಖರ್ಗೆ ಪರಿಸ್ಥಿತಿ ನೋಡಿ ದುಖಃವಾಯಿತು. ಅಧಿವೇಶನದ ವೇಳೆ ಬಿಸಿಲು ಇತ್ತು. ಆದರೆ ಕಾಂಗ್ರೆಸ್ ಪಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೆರಳು ನೀಡಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೆಸರಿಗೆ ಮಾತ್ರ ಅಧಿಕಾರ ನೀಡಲಾಗಿದೆ. ರಿಮೋಟ್ ಕಾಂಗ್ರೆಸ್ ಪರಿವಾರದ ಕೈನಲ್ಲಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
2023ರ ವರ್ಷವನ್ನು ಸಿರಿಧಾನ್ಯ ಬೆಳೆ ವರ್ಷ ಎಂದು ಘೋಷಿಸಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಇದರ ಪ್ರಯುಕ್ತವಾಗಿ ಪ್ರಧಾನಿ ನರೇಂದ್ರ ಮೋದಿ ಸಿರಿಧಾನ್ಯ ಕಾಳುಗಳನ್ನು ಮಡಿಕೆಗೆ ಹಾಕುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇನ್ನು, 160 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದ ಬೆಳಗಾವಿ ರೈಲು ನಿಲ್ದಾಣ ಕಾಮಗಾರಿ ಉದ್ಘಾಟಿಸಿದರು. ಬೆಳಗಾವಿ-ಲೋಂಡಾ ದ್ವಿಪಥ ಮಾರ್ಗ 632 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಸೇರಿದಂತೆ ಒಟ್ಟಾರೆ ರೈಲ್ವೆ ಇಲಾಖೆಯ ಒಟ್ಟು 1,122 ಕೋಟಿ ರೂಪಾಯಿಯ ಕಾಮಗಾರಿ, ಜನಜೀವನ ಮಿಷನ್ ಯೋಜನೆಯ 1,030 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೂ ಇದೇ ವೇಳೆ ಪ್ರಧಾನಿ ಚಾಲನೆ ನೀಡಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಪ್ರಧಾನಿಗೆ ಕಾಯಕಯೋಗಿಗಳಿಂದ ಸ್ವಾಗತ.. ಕುಂದಾನಗರಿಯಲ್ಲಿ ಮೋದಿ ಭರ್ಜರಿ ರೋಡ್ ಶೋ