ಚಿಕ್ಕೋಡಿ : ಪ್ರಸ್ತುತ ದಿನಮಾನದಲ್ಲಿ ಎಲ್ಲವೂ ಆನ್‌ಲೈನ್ ಮಯವಾಗಿದ್ದು, ಇದೀಗ ತೋಟಗಾರಿಕೆ ಇಲಾಖೆಯೂ ಸಹ ಆನ್ ಲೈನ್ ಮೂಲಕ ಸಸಿ ಮಾರಾಟ ಮಾಡುವುದಕ್ಕೆ ಮುಂದಾಗಿದೆ.
ತೊಟಗಾರಿಕೆ ಇಲಾಖೆ ಇಂತಹದೊಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಆನ್ ಲೈನ್ ಸಸಿ ಮಾರಾಟಕ್ಕೆ ಈ ಇಲಾಖೆ ಸಜ್ಜಾಗಿದೆ.
ವಿವಿಧ ತಳಿಗಳ ಸಸಿಗಳಾದ ಅಪೂಸ್, ಕೇಸರ ತಳಿಯ ಮಾವು, ಕಿಟಲ್ ಬಾಲ್, ಚಿಕ್ಕು, ದೂಫದಾಳ ತಳಿಯ ನೇರಳೆ, ಲಲಿತ ತಳಿಯ ಪೇರಲ, ಬಾಲ ನಗರ ತಳಿಯ ಪೇರಲ, ಬಾಲನಗರ ತಳಿಯ ಸೀತಾಫಲ, ಅರಸಿಕೆರೆ ತಳಿಯ ತೆಂಗು, ಸ್ಥಳೀಯ ಲಿಂಬು, ಕರಿಬೇವು ಸಸಿಗಳು ಸೇರಿದಂತೆ ಇನ್ನು ಹತ್ತು ಹಲವು ಸಸಿಗಳನ್ನು ಆನ್‌ಲೈನ್ ಮೂಲಕ ರೈತರು ಖರೀದಿಸುವ ಸುವರ್ಣಾವಕಾಶ ಒದಗಿ ಬಂದಿದೆ.
ತೋಟಗಾರಿಕೆ ಇಲಾಖೆ ಅಭಿವೃದ್ಧಿಪಡಿಸಿರುವ ವೆಬ್‌ಸೈಟ್ www.raitanamitrabelagavi.in ಎಂಬ ವೆಬ್ ಸೈಟ್ ಮೂಲಕ ರೈತರು ಗಿಡಗಳನ್ನು ಬುಕ್ ಮಾಡಬಹುದು. ಖಾಸಗಿ ನರ್ಸರಿಗಿಂತ ನಿಗದಿತ ಪ್ರಮಾಣದಲ್ಲಿ ಬೆಲೆ ನಿಗದಿ ಪಡಿಸಿ ಸಸಿಗಳ ಮಾರಾಟ ಮಾಡಲಾಗುತ್ತಿದೆ ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಥ ಕರೋಶಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್, ದೂಪದಾಳ ಭಾಗದಲ್ಲಿ ಸಿಸಿಗಳ ಆನ್ ಲೈನ್ ಮಾರಾಟ ಪ್ರಾರಂಭಗೊಂಡಿದ್ದು, ಜೂನ್ 1ರಿಂದ ಈಗಾಗಲೆ ಬುಕ್ ಮಾಡಿದ ಸಸಿಗಳನ್ನು ರೈತರಿಗೆ ತಲುಪಿಸುವ ಕಾರ್ಯ ತೋಟಗಾರಿಕೆ ಇಲಾಖೆ ಮಾಡಲಿದೆ ಎಂದು ಹೇಳಿದ್ಧಾರೆ.
ಮೂರು ಸಾವಿರ ಸಸಿಗಳ ಮಾರಾಟ ಗುರಿ ಹೊಂದಿರುವ ಬೆಳಗಾವಿ ತೋಟಗಾರಿಕಾ ಇಲಾಖೆ, ಸಾಮಾಜಿಕ ಅಂತರ ಮತ್ತು ಸರ್ಕಾರದ ನಿಯಮ ಪಾಲಿಸಲು ಹೊಸ ದಾರಿಯೊಂದನ್ನು ಕಂಡುಕೊಂಡಿದ್ದು, ರೈತರು ಮನೆಯಲ್ಲಿಯೆ ಕುಳಿತು ಆನ್ ಲೈನ್ನಲ್ಲಿ ಬುಕ್ ಮಾಡಿದರೆ ಸಾಕು, ರೈತರ ಗದ್ದೆಗೆ ಬಂದು ಬಿಡುತ್ತವೆ ಸಾವಿರ ಸಾವಿರ ಸಸಿಗಳು ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.