ಬೆಳಗಾವಿ: ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಯನ್ನು ಹಾಜರುಪಡಿಸಿ ಪರೀಕ್ಷೆ ಪಾಸು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಕೆಟ್ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಗೋಕಾಕ ತಾಲೂಕಿನ ಕಳ್ಳಿಗುದ್ದಿ ಗ್ರಾಮದ ನಿವಾಸಿ ಲಕ್ಷ್ಮಣ ವೆಂಕಣ್ಣ ಹೊಸಕೋಟೆ (27) ಹಾಗೂ ಘಟಪ್ರಭಾದ ಸಚಿನ್ ಗುಗ್ಗರಿ (21) ಬಂಧಿತ ಆರೋಪಿಗಳು.
ನೇಮಕಾತಿಯ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಗೊಂಡಿದ್ದ ಲಕ್ಷ್ಮಣ ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಲು ಜಿಲ್ಲಾ ಪೊಲೀಸ್ ಕಚೇರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಈತನ ದಾಖಲೆಗಳ ಜತೆಗೆ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ 2020ರ ಡಿ.16ರಂದು ನಡೆಸಲಾಗಿದ್ದ ದೈಹಿಕ ಸಾಮರ್ಥ್ಯ ಪರೀಕ್ಷೆಯ ಚಿತ್ರೀಕರಣದ ದೃಶ್ಯಾವಳಿ ಪರಿಶೀಲಿಸಲಾಗಿತ್ತು. ಆದರೆ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಈತನ ಬದಲಾಗಿ ಮತ್ತೋರ್ವ ನಕಲಿ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗಿರುವುದು ಚಿತ್ರೀಕರಣದ ವಿಡಿಯೋದಲ್ಲಿ ಬೆಳಕಿಗೆ ಬಂದಿತ್ತು.
ಓದಿ: ಎಫ್ಡಿಎ ಪರೀಕ್ಷೆಯಲ್ಲಿ ಕೀ ಉತ್ತರ ನೀಡಿದ ಆರೋಪ : ಓರ್ವ ವಶಕ್ಕೆ
ಬಳಿಕ ಸಹಾಯಕ ಆಡಳಿತ ಅಧಿಕಾರಿ ಮನೋಜ ಲಾಡ್ ಅವರು ಪ್ರಾಥಮಿಕ ವಿಚಾರಣೆ ನಡೆಸಿ, ಆರೋಪಿಯು ನಕಲಿ ಅಭ್ಯರ್ಥಿ ಏರ್ಪಾಡು ಮಾಡಿರುವ ಮಾಹಿತಿ ಪಡೆದುಕೊಂಡಿದ್ದಾರೆ. ಲಕ್ಷ್ಮಣನಿಂದ ಖಚಿತ ಮಾಹಿತಿ ಪಡೆದು ಲಕ್ಷ್ಮಣ ಹಾಗೂ ಸಚಿನ್ ಗುಗ್ಗರಿಯನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಧಾರವಾಡದ ಆನಂದ ಜೋಗಿ ಬಂಧನಕ್ಕೆ ಬಲೆ ಬೀಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಐಪಿಸಿ 120(ಬಿ), 202, 416,417, 419, 420, 465, 468 ಹಾಗೂ 471 ಕಲಂ ಅಡಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.